ಹುಬ್ಬಳ್ಳಿ: ದುಷ್ಕರ್ಮಿಗಳ ಗುಂಪೊಂದು ಯುವಕನೊಬ್ಬನ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಭೀಕರ ಕೃತ್ಯ ಇಲ್ಲಿನ ಕಾರವಾರ ರಸ್ತೆಯ ಕಾಂಗ್ರೆಸ್ ಕಚೇರಿ ಬಳಿ ಕಳೆದ ರಾತ್ರಿ ನಡೆದಿದೆ.
ಮೃತಪಟ್ಟ ಯುವಕನನ್ನು ವಿಜಯಬಸವ (28) ಎಂದು ಗುರುತಿಸಲಾಗಿದೆ. ಕೊಲೆ ಕೃತ್ಯ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.
ರಾತ್ರಿ ಸುಮಾರು 11.30ರ ಸಂದರ್ಭದಲ್ಲಿ ನಾಲ್ಕೈದು ಯುವಕರು ಜಗಳವಾಡಿರುವ ದೃಶ್ಯ ಕಂಡುಬಂದಿದ್ದು, ಈ ವೇಳೆ ವಿಜಯಬಸವನ ಮೇಲೆ ಹಲ್ಲೆ ನಡೆಸಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.





























