ಬೆಳಗಾವಿ :ರಾಜ್ಯ ರಾಜಕಾರಣದಲ್ಲಿ ಅತೀ ಹೆಚ್ಚು ಸದ್ದು ಮಾಡುವ ಬೆಳಗಾವಿಯಲ್ಲಿ ಲಿಂಗಾಯತ ಅಭ್ಯರ್ಥಿಗೆ ಒಳ ಏಟಿನ ಆತಂಕ ಎದುರಾಗಿದ್ದು, ಈ ಒಳ ಏಟಿನ ಹೊಡೆತ ಬಿದ್ದಲ್ಲಿ ಬಿಜೆಪಿಗೆ ಸ್ವಲ್ಪ ಕಷ್ಟವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಬಿಜೆಪಿಯ ಅಭ್ಯರ್ಥಿಗೆ ನಿರೀಕ್ಷೆಯಷ್ಟು ಮತ ಬಿಳುವ ನಿರೀಕ್ಷೆ ಇಲ್ಲದಾಗಿದೆ. ಲಿಂಗಾಯತ ಮತದಾರರು ಮೂರನೇ ಸ್ಥಾನದಲ್ಲಿದ್ದರೂ, ಈ ಕ್ಷೇತ್ರದಲ್ಲಿನ ಅಭ್ಯರ್ಥಿಯ ಗೆಲುವಿಗೆ ನಿರ್ಣಾಯಕವಾಗಿದ್ದಾರೆ. ಆದರೆ ಮತದಾನದಿಂದ ಅಂತರ ಕಾಯ್ದುಕೊಳ್ಳುತ್ತಾ ಬಂದಿದ್ದಾರೆ. ಆದರೆ ಈ ಭಾರಿ ಲಿಂಗಾಯತ ಸಮುದಾಯ ಅಭ್ಯರ್ಥಿಗೆ ಮಣೆಹಾಕಿರುವ ಬಿಜೆಪಿ, ತಮ್ಮ ಸಮುದಾಯದ ಮತಗಳನ್ನು ಸೆಳೆದುಕೊಳ್ಳುವ ನಿರೀಕ್ಷೆ ಹೊಂದಿದ್ದಾರೆ. ಆದರೆ ಅದೇ ಸಮುದಾಯದ ರಾಜಕುಮಾರ ಟೋಪಣ್ಣವರ ಆಮ್ ಆದ್ಮಿ ಪಕ್ಷದಿಂದ ಹಾಗೂ ಶಿವಾನಂದ ಮುಗಳಿಹಾಳ ಜೆಡಿಎಸ್‌ನಿಂದ ಅಖಾಡಕ್ಕೆ ಧುಮ್ಮಕ್ಕಿದ್ದಾರೆ.
ಆಪ್ ಅಭ್ಯರ್ಥಿ ಮೊದಲಿಂದಲೂ ಅಭಿವೃದ್ಧಿ ಪರ ಚಿಂತನೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿಕೊಂಡು ಬಂದಿದ್ದರಿಂದ ಕ್ಷೇತ್ರಕ್ಕೆ ಚಿರಪರಿಚಿತರಾಗಿದ್ದಾರೆ. ಆದರೆ ಜೆಡಿಎಸ್ ಅಭ್ಯರ್ಥಿಯೂ ಹೊರತಾಗಿಲ್ಲ. ಆದರೆ ಬಿಜೆಪಿ ಅಭ್ಯರ್ಥಿ ಹೊರತುಪಡಿಸಿ, ಆಪ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಲಿಂಗಾಯತ ಸಮುದಾಯವರಾಗಿದ್ದರಿಂದ ಬಿಜೆಪಿಗೆ ಆ ಸಮುದಾಯದ ಮತಗಳು ನಿರೀಕ್ಷಿತ ಪ್ರಮಾಣದಲ್ಲಿ ಬಿಳುವುದು ಅಷ್ಟೇ ಸುಲಭವಲ್ಲ. ಅಲ್ಲದೇ ಸಮುದಾಯದ ಕೆಲವು ಸ್ವಯಂ ಘೋಷಿತ ನಾಯಕರು, ಇಡೀ ಸಮುದಾಯದವೇ ತಮ್ಮ ಕಪಿ ಮುಷ್ಠಿಯಲ್ಲಿದೆ ಎಂದು ಬಿಜೆಪಿ ಅಭ್ಯರ್ಥಿ ಸುತ್ತಮುತ್ತ ಗಿರಿಕಿ ಹೊಡೆಯುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಅದೇ ಸ್ವಯಂ ಘೋಷಿತ ನಾಯಕನ ವಿರುದ್ಧವೇ ಬಹುತೇಕ ನಾಯಕರು ಅಸಮಾಧಾನ ವ್ಯಕ್ತಪಡಿಸಿರುವ ಹಲವು ನಿದರ್ಶನಗಳಿವೆ. ಆದ್ದರಿಂದ ಆ ಸ್ವಯಂ ಘೋಷಿತ ಲೀಡರ್‌ನ ಮುಖ ನೋಡಿದರೆ ಬಹುತೇಕ ಲಿಂಗಾಯತ ಮತಗಳು ಬೇರೆ ಅಭ್ಯರ್ಥಿಯತ್ತ ವಾಲುವ ಎಲ್ಲಾ ಸಾಧ್ಯತೆಗಳಿದೆ. ಈ ಕುರಿತು ಪಕ್ಷದ ಕಾರ್ಯಕರ್ತರಲ್ಲಿಯೇ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಕೆಲವು ಕಾರ್ಯಕರ್ತರು ಮತ್ತು ಮುಖಂಡರು ಈಗಾಗಲೇ ಬಿಜೆಪಿಯಿಂದ ಅಂತರ ಕಾಯ್ದುಗೊಳ್ಳುತ್ತಿರುವುದನ್ನು ತಳ್ಳಿಹಾಕುವಂತಿಲ್ಲ. ಈ ಸ್ವಯಂ ಘೋಷಿತ ನಾಯಕರು ಅಭ್ಯರ್ಥಿಯ ಸುತ್ತಮುತ್ತ ಗಿರಿಕಿ ಹೊಡೆಯುತ್ತಿರುವುದೇ ಬಿಜೆಪಿ ಅಭ್ಯರ್ಥಿಗೆ ಕಬ್ಬಿಣ ಕಡಲೆಯಾಗಿ ಮಾರ್ಪಟ್ಟಿದ್ದು, ಸುಗಮ ದಾರಿಗೆ ಮುಳ್ಳಾಗಿ ಪರಿಣಮಿಸಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.