This is the title of the web page
This is the title of the web page

ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಮೈಸೂರು ದಸರಾದಂತೆ ಕಂಗೊಳಿಸುತ್ತಿದೆ ಕುಂದಾನಗರಿ

ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಮೈಸೂರು ದಸರಾದಂತೆ ಕಂಗೊಳಿಸುತ್ತಿದೆ ಕುಂದಾನಗರಿ

ಬೆಳಗಾವಿ:ಕರ್ನಾಟಕದ ಖಾದಿ ಭಗೀರಥ ಎಂದು ಕರೆಯಲ್ಪಡುವ ಬೆಳಗಾವಿಯ ಗಂಗಾಧರರಾವ್ ದೇಶಪಾಂಡೆ ಅವರು 1924ರ ಕಾಂಗ್ರೆಸ್ ಅಧಿವೇಶನದ ಪ್ರಮುಖ ಆಯೋಜಕರು ಮತ್ತು ಸ್ವಾಗತಿ ಸಮಿತಿ ಅಧ್ಯಕ್ಷರಾಗಿದ್ದರು. ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನವನ್ನು ಆಯೋಜಿಸುವಲ್ಲಿ ದೇಶಪಾಂಡೆ ಪ್ರಮುಖ ಪಾತ್ರ ವಹಿಸಿದ್ದರು.

ಶತಮಾನದ ಹಿಂದೆ ಮಹಾತ್ಮಾ ಗಾಂಧಿ ಅವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನವನ್ನು ಸ್ಮರಣೀಯಗೊಳಿಸಲು ಕರ್ನಾಟಕದ ಗಡಿ ಜಿಲ್ಲೆ, ಕುಂದಾ ನಗರಿ ಬೆಳಗಾವಿ ಸಜ್ಜುಗೊಂಡಿದೆ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ಯೋಜಿಸಿದ್ದು, ಇಡೀ ನಗರ ಮೈಸೂರು ದಸರಾದಂತೆ ಕಂಗೊಳಿಸುತ್ತಿದೆ.

ಬೆಳಗಾವಿಯಲ್ಲಿ ಡಿಸೆಂಬರ್ 26 ಮತ್ತು 27, 1924 ರಂದು ನಡೆದ ಕಾಂಗ್ರೆಸ್ ಅಧಿವೇಶನವು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಪ್ರಮುಖ ಕ್ಷಣವಾಗಿದೆ. ಈ ಅಧಿವೇಶನದಲ್ಲಿ, ಮಹಾತ್ಮ ಗಾಂಧಿಯವರು ಖಾದಿ ನೂಲುವ ಬಗ್ಗೆ ಮನವಿ ಮಾಡಿದ್ದರು ಮತ್ತು ಅಸಹಕಾರಕ್ಕೆ ಕರೆ ನೀಡಿದರು. ಇದು ಸ್ವಾತಂತ್ರ್ಯಪೂರ್ವ ಭಾರತದಲ್ಲಿ ನಡೆದ ಪ್ರಮುಖ ಚಳುವಳಿಯಾಯಿತು.

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ವಿವರಗಳನ್ನು ನೀಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, 1924ರ ಸಮಾವೇಶದ ವರದಿಯನ್ನು ಸಂಗ್ರಹಿಸಿದ್ದು, ನಾಳೆ ಮರುಮುದ್ರಿತ ಆವೃತ್ತಿಯನ್ನು ಬಿಡುಗಡೆ ಮಾಡುತ್ತೇವೆ. ಡಿಸೆಂಬರ್ 26 ರಂದು ಬೆಳಗ್ಗೆ 10 ಗಂಟೆಗೆ ವೀರಸೌಧದಲ್ಲಿ ಮಹಾತ್ಮ ಗಾಂಧಿ ಭಾರತ ಅನಾವರಣಗೊಳ್ಳಲಿದೆ. ನಂತರ ಬೆಳಗ್ಗೆ 10.45ಕ್ಕೆ ಖಾದಿ ಮೇಳ ಉದ್ಘಾಟನೆಯಾಗಲಿದೆ ಎಂದರು.

‘ಗಾಂಧಿ ಭಾರತ’ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ಡಿಸೆಂಬರ್ 27 ರಂದು ಎಐಸಿಸಿಯಿಂದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶ ನಡೆಯಲಿರುವ ಸಿಪಿಇಡಿ ಮೈದಾನದ ಸುತ್ತಲಿನ ಪ್ರದೇಶಕ್ಕೆ ಮಹಾತ್ಮ ಗಾಂಧಿನಗರ ಎಂದು ನಾಮಕರಣ ಮಾಡಲಾಗಿದೆ. ದೇಶದಲ್ಲಿ ಇತಿಹಾಸದಲ್ಲಿ ಈ ಕ್ಷಣ ಅಚ್ಚಳಿಯದೆ ಉಳಿಯಲಿದೆ ಎಂದರು.

ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಗಂಗಾಧರರಾವ್ ದೇಶಪಾಂಡೆ ಅವರಿಗೂ ಸೂಕ್ತ ಪ್ರಾಧಾನ್ಯತೆ ನೀಡಲಾಗಿದ್ದು, ಅವರ ಸ್ಮಾರಕ ಮತ್ತು ಫೋಟೋ ಗ್ಯಾಲರಿಯನ್ನು ಗುರುವಾರ ಉದ್ಘಾಟಿಸಲಾಗುವುದು ಎಂದು ಡಿಸಿಎಂ ತಿಳಿಸಿದರು.

ಡಿಸೆಂಬರ್ 26 ರಿಂದ ಅಧಿಕೃತ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಕಾರ್ಯಕ್ರಮ ಆರಂಭವಾಗಲಿದೆ. ಡಿಸೆಂಬರ್ 26 ರಂದು ಮಧ್ಯಾಹ್ನ 3 ಗಂಟೆ ಎಐಸಿಸಿ ಕಾರ್ಯಕಾರಣಿ ಸಮಿತಿ ಸಭೆ ನಡೆಯಲಿದೆ. 1924 ರ ಡಿಸೆಂಬರ್ 26 ರ ಮಧ್ಯಾಹ್ನ 3 ಗಂಟೆ ಮಹಾತ್ಮಾ ಗಾಂಧಿ ಅಧ್ಯಕ್ಷತೆಯಲ್ಲಿ ಕಾರ್ಯಕಾರಣಿ ಸಭೆ ನಡೆದಿತ್ತು. ಅದೇ ಸಮಯದಲ್ಲಿ ಈಗಲೂ ಸಭೆ ನಡೆಯಲಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.