ಹುಕ್ಕೇರಿ: “ಪೂಜೇರಿ ಅವರ ಶೈಕ್ಷಣಿಕ ಸೇವೆ ಸಮಾಜಕ್ಕೆ ಮಾದರಿ”ಸತ್ಕಾರ ಸಮಾರಂಭದಲ್ಲಿ ಬಸವರಾಜ ಖಡಕಬಾವಿ ಅಭಿಮತ. ಇತ್ತೀಚಿಗೆ ನಿವೃತ್ತರಾದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೊಸೂರು ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಚ್. ಎಲ್. ಪೂಜಾರಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರತಿಶತ 95 ಅಂಕಗಳೊಂದಿಗೆ ಬೆಳಗಾವಿ ಜಿಲ್ಲೆಗೆ ಕೀರ್ತಿಯ ಪತಾಕೆಯನ್ನು ಹಾರಿಸಿದ ಸುವರ್ಣ ಲೋಕ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಸುರೇಶ್ ನೇರ್ಲಿ ಅವರ ಪುತ್ರಿ ಬೆಳಗಾವಿಯ ಆರ್ ಎಲ್ ಎಸ್ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಸಾಕ್ಷಿ ಸುರೇಶ ನೇರ್ಲಿ ಅವರ ಸತ್ಕಾರ ಸಮಾರಂಭವನ್ನು ಹಿಡಕಲ್ ಜಲಾಶಯದ ಸರ್ ಎಂ ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕರ್ನಾಟಕ ಗ್ರಾಮೀಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸವರಾಜ ಕಡಕಬಾವಿ ಅವರು ನಿವೃತ್ತ ಶಿಕ್ಷಕ ಎಚ್.ಎಲ್.ಪೂಜೇರಿಯವರ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಗಳು ಸಮಾಜಕ್ಕೆ ಮಾದರಿಯಾಗಿದ್ದು ಮಕ್ಕಳ ಮೇಲಿನ ವಿಶೇಷ ಕಾಳಜಿಯನ್ನು ಹೊಂದುವುದರ ಮೂಲಕ ಅನೇಕ ಬಡ ಮಕ್ಕಳಿಗೆ ಆಸರೆಯಾಗಿದ್ದಾರೆ ಎಂದರು.
ವಿಜ್ಞಾನ ವಿಭಾಗದಲ್ಲಿ ಶೇಕಡಾ 95 ಅಂಕಗಳೊಂದಿಗೆ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿ ಸಾಕ್ಷಿ ಸುರೇಶ ನೇರ್ಲಿ ಅವರನ್ನು ಕುರಿತು ಮಾತನಾಡಿ ತಂದೆ ತಾಯಿ ಪ್ರೋತ್ಸಾಹದಿಂದಾಗಿ ವಿದ್ಯಾರ್ಥಿನಿಯು ಇಂದು ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ ಅತ್ಯುತ್ತಮ ಅಂಕಗಳೊಂದಿಗೆ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದು ಮುಂದಿನ ಭವಿಷ್ಯತ್ತಿನ ವಿದ್ಯಾಭ್ಯಾಸ ಬಂಗಾರಮಯವಾಗಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಚ್.ಎಲ್. ಪೂಜೇರಿ ಅವರು ನನ್ನ 30 ವರ್ಷಗಳ ವೃತ್ತಿ ಜೀವನದಲ್ಲಿ ಪ್ರತಿಯೊಬ್ಬರೂ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಸಹಕರಿಸಿ ಶಾಲಾ ಅಭಿವೃದ್ಧಿಗಾಗಿ ಬೆನ್ನೆಲುಬಾಗಿ ನಿಂತ ಸುತ್ತ ಮುತ್ತಲಿನ ಭಾಗದ ಶಿಕ್ಷಣ ಪ್ರೇಮಿಗಳಿಗೆ, ರಾಜಕೀಯ ಧುರೀಣರಿಗೆ, ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ,ದಲಿತಪರ ಸಂಘಟನೆಗಳ ಮುಖ್ಯಸ್ಥರಿಗೆ ಹಾಗೂ ವಿಶೇಷವಾಗಿ ಹೊಸೂರು ಗ್ರಾಮದ ಗ್ರಾಮಸ್ಥರಿಗೆ ಅಭಾರಿಯಾಗಿದ್ದೇನೆ ಎಂದು ಆಶಯ ನುಡಿ ವ್ಯಕ್ತಪಡಿಸಿದರು
ವಿದ್ಯಾರ್ಥಿನಿಯಾದ ಸಾಕ್ಷಿ ಸುರೇಶ ನೇರ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನನ್ನ ಈ ಒಂದು ವಿಶೇಷ ಸಾಧನೆಗೆ ಪ್ರೀತಿ ಪೂರಕವಾದ ಸನ್ಮಾನವನ್ನು ಏರ್ಪಡಿಸಿದ ಕೆ ಆರ್ ಇ ಸಂಸ್ಥೆಯ ಅಧ್ಯಕ್ಷರಿಗೆ ವಿವಿಧ ಸಂಘಟನೆಗಳ ಮುಖ್ಯಸ್ಥರುಗಳಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದರು
ಸಾಧಕರನ್ನು ಉದ್ದೇಶಿಸಿ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಡಿ.ಎಂ ಹೆಜ್ಜೆ, ಹಿರಿಯ ಸಾಹಿತಿಗಳಾದ ಪ್ರಕಾಶ ಹೊಸಮನಿ, ಯುವ ಧುರೀಣರಾದ ಕೆಂಪಣ್ಣ ಶಿರಹಟ್ಟಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಗುರಪ್ಪ ತಳವಾರ, ಅಬಕಾರಿ ಇಲಾಖೆಯ ನಿವೃತ್ತ ಪಿ.ಎಸ್.ಆಯ್. ಶ್ರೀ ಸಿದ್ದಪ್ಪ ಹೊಸಮನಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಕಲ್ಲಪ್ಪ ಕಟ್ಟಿ, ಕೆ ವೆಂಕಟೇಶ,ಎಸ್.ಬಿ.ಶಿಂಗೆ ವಿವಿಧ ಶಾಲೆಗಳ ಶಿಕ್ಷಕರುಗಳು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಂಕರ ಖಾತೆದಾರ ಸ್ವಾಗತಿಸಿದರು, ಶಿಕ್ಷಕ ರಾಜು ತಳವಾರ ವಂದಿಸಿದರು ಶ್ರೀ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕ ಎ.ವೈ.ಸೋನ್ಯಾಗೋಳ ಕಾರ್ಯಕ್ರಮ ನಿರೂಪಿಸಿದರು