ಕನ್ನಡ ದ್ರೋಹಿ ಬಿಜೆಪಿ: ಚುನಾವಣೆಗೂ ಮುನ್ನ ಶುರುವಾಯ್ತು ಕಾಂಗ್ರೆಸ್ಸಿನ ಮತ್ತೊಂದು ಅಭಿಯಾನ. ಕಾಂಗ್ರೆಸ್‌ ಸರಣಿ ಟ್ವೀಟ್‌

ಕನ್ನಡ ದ್ರೋಹಿ ಬಿಜೆಪಿ: ಚುನಾವಣೆಗೂ ಮುನ್ನ ಶುರುವಾಯ್ತು ಕಾಂಗ್ರೆಸ್ಸಿನ ಮತ್ತೊಂದು ಅಭಿಯಾನ. ಕಾಂಗ್ರೆಸ್‌ ಸರಣಿ ಟ್ವೀಟ್‌

 

ಬೆಂಗಳೂರು, ಏ 9 :’ನಂದಿನಿ ಎಂಬ ಕನ್ನಡ ಕಾಮಧೇನುವಿನ ಕೆಚ್ಚಲು ಕೊಯ್ಯಲು ಹೊರಟಿದೆ ಬಿಜೆಪಿ. ಅಮೂಲ್ + ನಂದಿನಿ ವಿಲೀನ ಎಂದ ಅಮಿತ್ ಶಾ ಮೊಸರಿಗೆ ದಹಿ ಹೆಸರು ಕಡ್ಡಾಯಗೊಳಿಸಿದರು.  ಹಾಲು ಪೂರೈಕೆಯಲ್ಲಿ ಉದ್ದೇಶಪೂರ್ವಕ ವ್ಯತ್ಯಯ ಸೃಷ್ಟಿಸಿದರು. ಈಗ ಅಮೂಲ್ ಮೂಲಕ ನಂದಿನಿಯನ್ನು ನಂಬಿದ ರಾಜ್ಯದ ರೈತರನ್ನು ಸರ್ವನಾಶ ಮಾಡುತ್ತಿದೆ #ಕರ್ನಾಟಕವಿರೋಧಿಬಿಜೆಪಿ’ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ  2023 ) ಕೆಲ ದಿನಗಳು ಬಾಕಿ ಇರುವಾಗಲೇ ಆಡಳಿತರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ಸಿನ ಮತ್ತೊಂದು ಅಭಿಯಾನ ಶುರುವಾಗಿದೆ. ಹಲವು ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

‘ಕನ್ನಡ, ಕರ್ನಾಟಕ, ಕನ್ನಡಿಗ ಈ ಮೂರೂ ವಿಷಯಗಳಲ್ಲಿ ಬಿಜೆಪಿ ಹಲವಾರು ದ್ರೋಹ ಎಸಗಿದ ಕರಾಳ ಇತಿಹಾಸವಿದೆ. ಕರ್ನಾಟಕವನ್ನ ಒಡೆಯುವುದಷ್ಟೇ ಅಲ್ಲ, ಪರ ರಾಜ್ಯಗಳಿಗೆ ಕರ್ನಾಟಕವನ್ನು ಹರಿದು ಹಂಚುವುದು ಬಿಜೆಪಿಯ ಆಂತರ್ಯದ ಅಜೆಂಡಾ. ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎಂಬ ಶಾಸಕ ಶಿವರಾಜ್ ಪಾಟೀಲ್ ಹೇಳಿಕೆಗೆ #ಕರ್ನಾಟಕದ್ರೋಹಿಬಿಜೆಪಿ ಮೌನ ವಹಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ

ಕರ್ನಾಟಕವನ್ನ ಒಡೆದಾಳುವ ಬಿಜೆಪಿಯ ಇರಾದೆ ಇಂದು ನಿನ್ನೆಯದಲ್ಲ, ಕರ್ನಾಟಕವನ್ನು ಇಬ್ಬಾಗ ಮಾಡುವ RSS ಅಜೆಂಡಾವನ್ನ ಬಿಜೆಪಿಯ ನಾಗಪುರದ ನೌಕರರು ಉಚ್ಛರಿಸುತ್ತಿದ್ದಾರೆ. ರಾಜ್ಯ ಒಡೆಯುವುದು ಬಿಜೆಪಿಯ ಅಜೆಂಡಾ ಅಲ್ಲ ಎಂದಾದರೆ ಆನಂದ್ ಸಿಂಗ್ ಹೆಳಿಕೆ ವಿರುದ್ಧ ಕ್ರಮ ಕೈಗೊಂಡಿಲ್ಲವೇಕೆ? ಹೇಳಿಕೆಯನ್ನು ಖಂಡಿಸಿಲ್ಲವೇಕೆ?’ ಎಂದು ಕಾಂಗ್ರೆಸ್‌ ಕೇಳಿದೆ.

‘ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಮುಂಚೂಣಿ ರಾಜ್ಯವಾಗಿದ್ದರೂ ಕರ್ನಾಟಕಕ್ಕೆ ಸಿಗುವುದು ಮಾತ್ರ ಬಿಡಿಗಾಸು. ಕರ್ನಾಟಕದ ಅಸ್ಮಿತೆ, ಆರ್ಥಿಕತೆ ಎರಡನ್ನೂ ಮುಳುಗಿಸುವುದು ಬಿಜೆಪಿಯ ಷಡ್ಯಂತ್ರ. ಕರ್ನಾಟಕದ ಸಾಲವನ್ನು ಡಬಲ್ ಮಾಡಿದ್ದೇ ಡಬಲ್ ಇಂಜಿನ್‌ಗಳ ಸಾಧನೆ. 25 ಸಂಸದರನ್ನ ಪಡೆದ #ಕರ್ನಾಟಕವಿರೋಧಿಬಿಜೆಪಿ ಮಾಡಿದ್ದು ಕನ್ನಡಿಗರಿಗೆ ದ್ರೋಹ ಮಾತ್ರ’ ಎಂದು ಕೆಪಿಸಿಸಿ ಟ್ವೀಟ್‌ ಮಾಡಿದೆ.

ಕರ್ನಾಟಕದ ‘ನಂದಿನಿ’ ಅನ್ನು ಗುಜರಾತ್‌ನ ಅಮುಲ್‌ಗೆ ಮಾರಾಟ ಮಾಡುವ ಬಿಜೆಪಿಯ ಷಡ್ಯಂತ್ರ ಈಗ ಸ್ಪಷ್ಟವಾಗಿದೆ. ಅಮಿತ್ ಶಾ ಅವರು ಮೊದಲಿಗೆ ಬಹಿರಂಗವಾಗಿ ಹೇಳಿಕೆ ನೀಡಿದರು. ಇದೀಗ ಶೋಭಾ ಕರಂದ್ಲಾಜೆ ಅದನ್ನು ಬೆಂಬಲಿಸಿದ್ದಾರೆ. ನಂದಿನಿ ಇಳಿಕೆ, ಅಮುಲ್ ಗಳಿಕೆ, ಬೊಮ್ಮಾಯಿ ಸರ್ಕಾರ ಸರ್ಕಾರ ‘ಮೂಕ’ ಬಸವ! ನಂದಿನಿ ಉಳಿಸಿ, ಬಿಜೆಪಿ ಓಡಿಸಿ!’ ಎಂದು ಟ್ವೀಟ್‌ ಮಾಡಿದ್ದಾರೆ.