70ನೇ ಕನ್ನಡ ರಾಜ್ಯೋತ್ಸವ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟನೆ

70ನೇ ಕನ್ನಡ ರಾಜ್ಯೋತ್ಸವ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟನೆ

 

ಬೆಳಗಾವಿ  : ಜಿಲ್ಲೆಯ ಮಹಾಜನಗಳೇ,
ಎಲ್ಲರಿಗೂ 70ನೇ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಕರ್ನಾಟಕ ರಾಜ್ಯೋತ್ಸವದ ಇಂದಿನ ಸಂಭ್ರಮದಲ್ಲಿ ಭಾಗಿಯಾಗಿರುವ ಬೆಳಗಾವಿ ಜಿಲ್ಲೆಯ ಹಿರಿಯ ಜೀವಿಗಳಿಗೆ, ಕರ್ನಾಟಕದ ಏಕೀಕರಣಕ್ಕೆ ದುಡಿದ ಮಹನೀಯರಿಗೆ, ವಿದ್ವಾಂಸರು, ಕವಿ-ಸಾಹಿತಿಗಳಿಗೆ, ಚಿಂತಕರು, ಶಾಸಕರು, ಸಂಸದರು ಹಾಗೂ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಸಹೋದರ-ಸಹೋದರಿಯರು ಮತ್ತು ಮಾಧ್ಯಮದ ಸ್ನೇಹಿತರಿಗೆ ರಾಜ್ಯೋತ್ಸವದ ಶುಭಾಶಯಗಳು.
ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೊಳ, ಪುಂಡಲಿಕ ಶಾಸ್ತಿç, ಶ್ರೀಮತಿ ರಾಜ್‌ಶ್ರಿ ನಾಗರಾಜು ಇವರಿಗೂ ಅಭಿನಂದನೆ ಸಲ್ಲಿಸುತ್ತೇನೆ.

“ವೇಣುಗ್ರಾಮ”ವೆಂದು ಹೆಸರುವಾಸಿಯಾಗಿದ್ದ ನಮ್ಮ ಬೆಳಗಾವಿಯು ತನ್ನ ವಿಶಿಷ್ಟ ಮತ್ತು ವಾತಾನುಕೂಲ ಪರಿಸರದಿಂದಾಗಿ ಎಲ್ಲರಿಗೂ ಪ್ರಿಯವಾಗಿದೆ. ಐತಿಹಾಸಿಕವಾಗಿ ಜಿಲ್ಲೆಯ ಹಲಸಿ ಗ್ರಾಮವು ಕದಂಬ ಅರಸರ ರಾಜಧಾನಿಯಾಗಿದ್ದ ಸಂಗತಿಯು ಶಾಸನಗಳು ಮತ್ತು ತಾಮ್ರ ಪತ್ರಗಳ ಆಧಾರದಿಂದ ತಿಳಿದುಬರುತ್ತದೆ.
ದೆಹಲಿಯ ಸುಲ್ತಾನರ ಹಾಗೂ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿದ್ದ ಬೆಳಗಾವಿ, ಕ್ರಿ.ಶ 1347ರಲ್ಲಿ ಬಹುಮನಿ ಸುಲ್ತಾನರ ಆಳ್ವಿಕೆಯ ಭಾಗವಾಗಿದ್ದ ಕುರಿತಂತೆ ಜಿಲ್ಲೆಯಾದ್ಯಂತ ಅನೇಕ ಸ್ಮಾರಕಗಳನ್ನು ನಾವು ಇಂದಿಗೂ ಕಾಣಬಹುದಾಗಿದೆ.
ಬ್ರಿಟೀಷರೊಡನೆ ಸ್ವಾತಂತ್ರ‍್ಯ ಹೋರಾಟಕ್ಕೆ ನಾಂದಿ ಹಾಡಿದ ಕಿತ್ತೂರಿನ ರಾಣಿ ಚೆನ್ನಮ್ಮ; ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಪ್ರಪ್ರಥಮ ಮಹಿಳಾ ಸೈನ್ಯವನ್ನು ಕಟ್ಟಿದ ಬೆಳವಡಿ ಮಲ್ಲಮ್ಮ ನಮ್ಮ ನಾಡಿನ ಧೀಮಂತ ಶಕ್ತಿಯಾಗಿದ್ದಾರೆ.
ಅನೇಕ ಮಹನೀಯರ ಅವಿರತ ಹೋರಾಟದ ಫಲವಾಗಿ 1956ರ ನವೆಂಬರ್ 1 ರಂದು ನಮ್ಮ ಹೆಮ್ಮೆಯ ಕರುನಾಡು, ಚಂದನದ ತವರೂರು ಕರ್ನಾಟಕ ರಾಜ್ಯವು ಉದಯವಾಗಿದೆ.

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಬೆಳಗಾವಿ ಜಿಲ್ಲೆಯಿಂದ ಹಲವಾರು ಜನರು ಕ್ರಿಯಾಶೀಲರಾಗಿ ಹೋರಾಡಿದ್ದು, ಬೈಲಹೊಂಗಲದ ಗಂಗಾಧರ ತುರಮುರಿ, ಹುದಲಿಯ ಸ್ವಾತಂತ್ರ‍್ಯಯೋಧರಾದ ಗಂಗಾಧರರಾವ್ ದೇಶಪಾಂಡೆ, ಚಿಂಚಲಿಯ ರಾಷ್ಟ್ರೀಯವಾದಿ ಆರ್.ಎಸ್.ಹುಕ್ಕೇರಿ, ತ್ರಿವಿಧ ದಾಸೋಹಿ ನಾಗನೂರ ಶಿವಬಸವ ಮಹಾಸ್ವಾಮಿಗಳು, ಗೋಕಾವಿ ನಾಡಿನ ಬೆಟಗೇರಿ ಕೃಷ್ಣಶರ್ಮ, ಸವದತ್ತಿಯ ಶಂ.ಬಾ.ಜೋಶಿ, ಅಂಕಲಿಯ ಬಸವಪ್ರಭು ಕೋರೆ, ಅಥಣಿಯ ಬಿ.ಎನ್.ದಾತಾರ, ಕುಂದರನಾಡಿನ ಅಣ್ಣೂ ಗುರೂಜಿ, ದತ್ತೋಪಂತ ಬೆಳವಿ, ಸಂಪಗಾವಿಯ ಚನ್ನಪ್ಪ ವಾಲಿ ಮೊದಲಾದವರ ಕೊಡುಗೆ ಅವಿಸ್ಮರಣೀಯವಾಗಿದೆ.
ಮದ್ರಾಸ್, ಮುಂಬೈ ಸೇರಿದಂತೆ ವಿವಿಧ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳು ಒಂದಾಗಿ ಅಖಂಡ ಕರ್ನಾಟಕದ ಕನಸು ನನಸಾಗಿ ಇಂದಿಗೆ 69 ವರ್ಷಗಳು ಪೂರ್ಣಗೊಂಡಿದೆ. ಭಾರತಮಾತೆಯ ಮಡಿಲಿನಲ್ಲಿ ನಾವೆಲ್ಲರೂ ಇಂದು 70ನೇ ಕರ್ನಾಟಕ ರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿAದ ಆಚರಿಸುತ್ತಿರುವುದು ಕನ್ನಡನಾಡಿನ ಪ್ರಗತಿಗೆ ಸಾಕ್ಷಿಯಾಗಿದೆ.
ಈ ಸಂದರ್ಭದಲ್ಲಿ ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಕೈಗೊಂಡ ಕೆಲವು ಅಭಿವೃದ್ಧಿ ಕೆಲಸಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸುವುದರ ಜತೆಗೆ ಸರ್ವಜನರ ಹಿತಕ್ಕಾಗಿ “ಪಂಚ ಗ್ಯಾರಂಟಿ” ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ.
ಗಡಿ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿರುತ್ತದೆ.
ಜಿಲ್ಲೆಯಲ್ಲಿ ಪ್ರಸ್ತುತ ಹಿಂಗಾರು ಹಂಗಾಮಿಗೆ 4.25 ಲಕ್ಷ ಹೇಕ್ಟರ್ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಬಿತ್ತನೆಗೆ ಬೇಕಾಗುವ ಸುಮಾರು 26,092 ಕ್ವಿಂಟಲ್ ರಷ್ಟು ವಿವಿಧ ಬಿತ್ತನೆ ಬೀಜಗಳನ್ನು ದಾಸ್ತಾನುಕರಿಸಲಾಗಿದ್ದು, ಇಲ್ಲಿವರೆಗೆ 10,532 ಕ್ವಿಂಟಲ್ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ಬಿತ್ತನೆ ಬೀಜದ ಕೊರತೆ ಇರುವುದಿಲ್ಲ. ಸುಮಾರು 94,308 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳನ್ನು ದಾಸ್ತಾನು ಮಾಡಲಾಗಿದ್ದು, ಇಲ್ಲಿಯವರೆಗೆ ಸುಮಾರು 1.82 ಹೆಕ್ಟೇರ್ ಬಿತ್ತನೆ ಆಗಿರುತ್ತದೆ.
ಜಿಲ್ಲೆಯ 9000 ರೈತರಿಗೆ ಒಟ್ಟು 93.51 ಕೋಟಿ ಮೊತ್ತದ ವಿಮೆ ಪರಿಹಾರ ವಿತರಿಸಲಾಗಿದೆ.
ಗೃಹಲಕ್ಷ್ಮೀ ಯೋಜನೆಯ ಮುಖಾಂತರ ಮನೆ ಯಜಮಾನಿಗೆ ಪ್ರತಿ ತಿಂಗಳು ರೂ. 2,000/- ಗಳನ್ನು ನೇರವಾಗಿ ಯಜಮಾನಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಯಡಿ ಬೆಳಗಾವಿ ಜಿಲ್ಲೆಗೆ 11.87 ಲಕ್ಷ ಫಲಾನುಭವಿಗಳ ಗುರಿ ನಿಗದಿ ಪಡಿಸಿದ್ದು, ಇಲ್ಲಿಯವರೆಗೆ 11.76 ಲಕ್ಷ ಫಲಾನುಭವಿಗಳಿಗೆ 22 ಕಂತುಗಳಲ್ಲಿ ಒಟ್ಟು 4733 ಕೋಟಿ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗಿರುತ್ತದೆ.
***
ಶಕ್ತಿ ಯೋಜನೆ ಪ್ರಾರಂಭದ ನಂತರ ಪ್ರತಿದಿನ ಸರಾಸರಿ ಒಟ್ಟು 7.98 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಪ್ರತಿದಿನ ಒಟ್ಟು 2.58 ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುತ್ತದೆ.
ಶಕ್ತಿ ಯೋಜನೆ ಅಡಿಯಲ್ಲಿ 11- ಜೂನ್ -2023 ರಿಂದ 30-ಸೆಪ್ಟೆಂಬರ್ 2025 ವರೆಗೆ (843 ದಿನಗಳು) ಒಟ್ಟು 67.29 ಕೋಟಿ ಪ್ರಯಾಣಿಕರಲ್ಲಿ, 44.27 ಕೋಟಿ ಮಹಿಳಾ ಪ್ರಯಾಣಿಕರು (ಶೇಕಡಾ 65.8) ಪ್ರಯಾಣಿಸಿದ್ದು, ರೂ 1,103 ಕೋಟಿ ಮೊತ್ತದ ಶೂನ್ಯ ಟಿಕೇಟ್ ವಿತರಿಸಲಾಗಿದೆ.
“ಹಸಿವು’ ಮುಕ್ತ ಕರ್ನಾಟಕ” ಇದು ನಮ್ಮ ಸರರ್ಕಾರದ ಮುಖ್ಯ ಧೈಯವಾಗಿದ್ದು, ಇದಕ್ಕಾಗಿ ರಾಜ್ಯ ಸರರ್ಕಾರವು ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ ಗ್ಯಾರಂಟಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ.
ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ಐದು ಕೆ.ಜಿ. ಹೆಚ್ಚುವರಿ ಅಕ್ಕಿಯ ಬದಲಾಗಿ ರೂ.170 ರಂತೆ ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಮೂಲಕ ಹಣ ಜಮೆ ಮಾಡಲಾಗಿರುತ್ತದೆ. ಜುಲೈ 2023ರಿಂದ ಡಿಸೆಂಬರ್ 2024ರ ವರೆಗೆ 1025 ಕೋಟಿ ಮೊತ್ತವನ್ನು ಜಿಲ್ಲೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದ್ದು, ಫೆಬ್ರುವರಿ 2025 ರ ಮಾಹೆಯಿಂದ ಡಿ.ಬಿ.ಟಿ. ಹಣದ ಬದಲಾಗಿ ಪ್ರತಿ ಫಲಾನುಭವಿಗೆ 10 ಕೆ.ಜಿ. ಅಕ್ಕಿಯನ್ನು ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಒಟ್ಟು 39.26 ಲಕ್ಷ ಫಲಾನುಭವಿಗಳು ಪ್ರತಿ ಮಾಹೆ ಉಚಿತವಾಗಿ ಇದರ ಸದುಪಯೋಗ ಪಡೆಯುತ್ತಿದ್ದಾರೆ.

“ಯುವನಿಧಿ” ಯೋಜನೆಯಡಿ ಜಿಲ್ಲೆಯಲ್ಲಿ 41,834 ಅರ್ಜಿಗಳನ್ನು ಪರಿಗಣಿಸಲಾಗಿರುತ್ತದೆ. ಈ ಪೈಕಿ 14,082 ಪುರುಷರು ಹಾಗೂ 11,482 ಮಹಿಳೆಯರು ಸೇರಿದಂತೆ ಒಟ್ಟಾರೆ 25,564 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿರುತ್ತದೆ. ಉಳಿದ ಅರ್ಜಿದಾರರ ದಾಖಲೆಗಳ ಪರಿಶೀಲನೆ ನಡೆದಿರುತ್ತದೆ.

“ಗೃಹಜ್ಯೋತಿ” ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 10,51,697 ಸಂಖ್ಯೆಯ ಅರ್ಹ ಫಲಾನುಭವಿಗಳಿದ್ದು, ಸದರಿ ಯೋಜನೆಯಡಿ ಒಟ್ಟು 10,28,618 ಸಂಖ್ಯೆಯ ಬಳಕೆದಾರರು ನೋಂದಾಯಿಸಿದ್ದು, ಎಲ್ಲ ಅರ್ಹ ಫಲಾನುಭವಿಗಳಿಗೆ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸರಾಸರಿ ಬಳಕೆಯ ಆಧಾರದ ಮೇಲೆ ಮಾಸಿಕ 200 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್‌ನ್ನು ನೀಡಲಾಗುತ್ತಿದೆ.
****
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿAಗ್ ವಿಭಾಗದಿಂದ 221.49 ಕೋಟಿ ರೂ.ಗಳ ವೆಚ್ಚದಲ್ಲಿ 45 ಆರೋಗ್ಯ ಇಲಾಖೆಯ ವಿವಿಧ ಹಂತದ ಆಸ್ಪತ್ರೆಗಳ ಕಟ್ಟಡ ನಿರ್ಮಾಣದ ಕಾಮಗಾರಿಗಳು ಪೂರ್ಣಗೊಂಡಿದ್ದು, 19 ಕಾಮಗಾರಿಗಳು ಪ್ರಗತಿಯಲ್ಲಿವೆ.
ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನಾರೋಗ್ಯ, ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಒಟ್ಟು 6 ಲಕ್ಷ ಫಲಾನುಭವಿಗಳಿಗೆ ರೂ. 424 ಕೋಟಿ ರೂಗಳನ್ನು ವಿತರಿಸಲಾಗಿದೆ.
ಬೆಳಗಾವಿ ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸ್ಮಾರ್ಟ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ನಗರ ಬಸ್ ನಿಲ್ದಾಣವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಉದ್ಘಾಟಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಪಿಎಂ-ಉಷಾ(ಮೇರು) ಕಟ್ಟಡ ಕಾಮಗಾರಿಗಳು ಮತ್ತು ಹೆದ್ದಾರಿಯಿಂದ ವಿಶ್ವವಿದ್ಯಾನಿಲಯದ ರಸ್ತೆ ಕಾಮಗಾರಿಗೆ ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಿರುತ್ತಾರೆ.
***
ಜಿಲ್ಲೆಯಲ್ಲಿ 53 ಕ್ಕೂ ಹೆಚ್ಚು ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು ರೂ. 8320 ಕೋಟಿಗಿಂತ ಹೆಚ್ಚು ಬಂಡವಾಳ ಹೂಡಿಕೆ ಮಾಡಿ ಸುಮಾರು 27 ಸಾವಿರ ಜನರಿಗೆ ಉದ್ಯೋಗ ನೀಡಿವೆ.
ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಗೆ 38.95 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಈ ಯೋಜನೆಯಲ್ಲಿ 07 ಕೆರೆಗಳ ಪುನಶ್ಚೇತನ ಹಾಗೂ 07 ಉದ್ಯಾನವನಗಳ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ.
ಈ ಪೈಕಿ ಕೋಟೆಕೆರೆ ಅಭಿವೃದ್ಧಿ ಹಾಗೂ ಪುನುಶ್ಚೇತನಕ್ಕಾಗಿ 9.20 ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿ ನಿರ್ವಹಿಸಲು ಒಪ್ಪಿಗೆ ಪತ್ರ ನೀಡಲಾಗಿದ್ದು, ರೂ.5.75 ಕೋಟಿ ಮೊತ್ತದ 07 ಉದ್ಯಾನವನಗಳ ಸುಧಾರಣೆ ಕಾಮಗಾರಿಗಳಿಗೆ ಟೆಂಡರ ಕರೆಯಲಾಗಿದೆ.
ಬೆಳಗಾವಿ ನಗರದಲ್ಲಿ ಒಳಚರಂಡಿ ನಿರ್ಮಾಣ ಹಾಗೂ ಹಾಲಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಯೋಜನೆಯನ್ನು 45 ಕೋಟಿ ರೂ.ಗಳ ಮೊತ್ತವನ್ನು ಎನ್.ಜಿ.ಟಿ ಹಾಗೂ ಮಹಾನಗರ ಪಾಲಿಕೆಯ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಲೋಕೋಪಯೋಗಿ ಇಲಾಖೆಯ ವತಿಯಿಂದ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಗಳು-ಸುಧಾರಣೆಗಾಗಿ ಬೆಳಗಾವಿ ವಿಭಾಗದಡಿ 2024-25ನೇ ಸಾಲಿನಲ್ಲಿ ಒಟ್ಟು 52 ಕಾಮಗಾರಿಗಳನ್ನು ಅಂದಾಜು ಮೊತ್ತ ರೂ. 172.64 ಕೋಟಿಗಳ ಅನುದಾನದಡಿ ಕೈಗೊಳ್ಳಲಾಗುತ್ತಿದೆ.

ರಾಜ್ಯ ಹೆದ್ದಾರಿ ರಸ್ತೆಗಳು- ನವೀಕರಣ ಅಡಿ ಒಟ್ಟು 8.29 ಕಿ.ಮೀ. ಉದ್ದದ ರಸ್ತೆಯನ್ನು ರೂ. 19.50 ಕೋಟಿಗಳ ಅನುದಾನದಡಿ 08 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಸದರಿ ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ.
ಜಿಲ್ಲಾ ಮುಖ್ಯ ರಸ್ತೆ ಸೇತುವೆಗಳು ಅಡಿ ಒಟ್ಟು ರೂ. 3.23 ಕೋಟಿಗಳಿಗೆ 3 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಸದರಿ ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ.

ಲೋಕೋಪಯೋಗಿ ಇಲಾಖೆಯ ಕಟ್ಟಡಗಳು ಅಡಿ ಒಟ್ಟು 72 ಹೊಸ ಕಾಮಗಾರಿಗಳನ್ನು ಅಂದಾಜು ಮೊತ್ತ ರೂ. 53.38 ಕೋಟಿಗಳ ಅನುದಾನದಡಿ ಕೈಗೊಳ್ಳಲಾಗಿದೆ.
ಬೆಳಗಾವಿ ತಾಲ್ಲೂಕಿನ ಎನ್.ಹೆಚ್. 4 ಎ (ದೇಸೂರ)ದಿಂದ ಹುದಲಿವರೆಗೆ ಕೂಡುರಸ್ತೆ ಕಿ.ಮೀ 63.34 ರೈಲ್ವೆ ಮೇಲ್ಸೆತುವೆ ನಿರ್ಮಾಣ ಮಾಡುವುದು (ಹುದಲಿ ಗ್ರಾಮದ ಹತ್ತಿರ) ಕಾಮಗಾರಿಯುರೂ. 35.00 ಕೋಟಿ ಅನುದಾನದಡಿ ಮಂಜೂರಾಗಿರುತ್ತದೆ.
ಸದರಿ ಕಾಮಗಾರಿಯ ಟೆಂಡರ ಕರೆಯಲಾಗಿದ್ದು, ಟೆಂಡರ ಪ್ರಕ್ರಿಯೆ ಮುಗಿದ ನಂತರ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುವುದು.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 8.13 ಲಕ್ಷ ಉದ್ಯೋಗ ಚೀಟಿಗಳನ್ನು ವಿತರಿಸಲಾಗಿರುತ್ತದೆ. ವಾರ್ಷಿಕ ಭೌತಿಕ ಗುರಿ 115 ಲಕ್ಷಗಳ ಮಾನವ ದಿನಗಳನ್ನು ಗುರಿ ನಿಗದಿಪಡಿಸಲಾಗಿದ್ದು, ಶೇ 30.05% ರಷ್ಟು ಪ್ರಗತಿ ಸಾಧಿಸಲಾಗಿದೆ. ಅದರಂತೆ 1.79 ಲಕ್ಷ ಕುಟುಂಬಗಳಿಗೆ ಹಾಗೂ 2.53 ಲಕ್ಷ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗಿರುತ್ತದೆ.

2018 ರಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವಸತಿ ರಹಿತ ಮತ್ತು ನಿವೇಶನ ರಹಿತರ ಸಮೀಕ್ಷೆ ಕೈಗೊಂಡಿದ್ದು, ಜಿಲ್ಲಾದ್ಯಂತ 2.06 ಲಕ್ಷ ವಸತಿ ರಹಿತರನ್ನು ಹಾಗೂ 19,241 ನಿವೇಶನ ರಹಿತರನ್ನು ಅಂದರೆ ಒಟ್ಟು 2.25 ಲಕ್ಷ ಅರ್ಹ ವಸತಿ/ನಿವೇಶನ ರಹಿತರನ್ನು ಈಗಾಗಲೇ ಗುರುತಿಸಲಾಗಿರುತ್ತದೆ. ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬೆಳಗಾವಿ ಜಿಲ್ಲೆಯ ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ 25 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು, ಒಟ್ಟು 262 ಜನವಸತಿಗಳಿಗೆ ನದಿ ಜಲ-ಮೂಲದಿಂದ ಹಾಗೂ ಚಿಕ್ಕೋಡಿ ವಿಭಾಗದ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ 38 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು, ಒಟ್ಟು 717 ಜನವಸತಿಗಳಿಗೆ ನದಿ ಜಲ-ಮೂಲದಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯಡಿ ಬೆಳಗಾವಿ ನಗರದ ಒಳಚರಂಡಿ ಯೋಜನೆಯು 156 ಕೋಟಿ ರೂ. ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿ ಶೇ. 80 ರಷ್ಟು ಪೂರ್ಣಗೊಂಡಿದ್ದು ಬಾಕಿ ಕಾಮಗಾರಿ ಪ್ರಗತಿಯಲ್ಲಿದೆ.
ರಾಜ್ಯ ಸರ್ಕಾರದ ಯೋಜನೆಯಡಿಯಲ್ಲಿ ಬೈಲಹೊಂಗಲ ಪಟ್ಟಣಕ್ಕೆ 24ಘಿ7 ವಿತರಣಾ ಕೊಳವೆ ಮಾರ್ಗ ಅಳವಡಿಸುವ ಜೊತೆಗೆ ಸಗಟು ನೀರು ಸರಬರಾಜು ಸ್ಥಾವರಗಳ ಅಭಿವೃದ್ಧಿಗೊಳಿಸುವ ಯೋಜನೆಯನ್ನು 95 ಕೋಟಿ ರೂ. ಗಳ ಅನುದಾನದಲ್ಲಿ, ಸವದತ್ತಿ ಪಟ್ಟಣಕ್ಕೆ ರೇಣುಕಾ ಸಾಗರ (ಮಲಪ್ರಭಾ ಡ್ಯಾಂ) ಮೂಲದಿಂದ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು 92 ಕೋಟಿ ರೂ. ಅನುದಾನದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಹುಕ್ಕೇರಿ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಗೆ 69 ಕೋಟಿ ರೂ.ಗಳಿಗೆ ಅನುಮೋದನೆಗೊಂಡಿದ್ದು ಕಾಮಗಾರಿಯು ಪ್ರಗತಿಯಲ್ಲಿದೆ.
****
ಮಹನೀಯರೇ,
ಅಖಂಡ ಕರ್ನಾಟಕ ನಿರ್ಮಾಣದ ಕನಸು ನನಸು ಮಾಡಲು ಶ್ರಮಿಸಿದ ನಮ್ಮ ಹಿರಿಯರ ಆಶಯದಂತೆ ಸಮಗ್ರ ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ಕಟ್ಟಲು ಎಲ್ಲರೂ ಕೈ ಜೋಡಿಸೋಣ. ಕನ್ನಡ ನಾಡು-ನುಡಿ; ನೆಲ-ಜಲ ಸಂರಕ್ಷಣೆಗೆ ಸರಕಾರ ಸದಾ ಬದ್ಧವಾಗಿರುತ್ತದೆ.
ನಾವೆಲ್ಲರೂ ಒಂದಾಗಿ ಕನ್ನಡದ ತೇರನ್ನು ಮುನ್ನಡೆಸೋಣ; ಕರ್ನಾಟಕವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸೋಣ ಎಂದು ಆಶಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

*ಜೈ ಹಿಂದ್-ಜೈ ಕರ್ನಾಟಕ*