ಅಲಿರಾಜ್‌ಪುರ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ. 400 ಅಲ್ಲ, ಕೇವಲ 150 ಸ್ಥಾನ ಕೂಡಾ ಗೆಲ್ಲಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯ ಜೋಬಾತ್ ಪಟ್ಟಣದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಆರ್ ಎಸ್ ಎಸ್ ಸಂವಿಧಾನ ಬದಲಾವಣೆಗೆ ಹೊರಟಿದ್ದು, ಸಂವಿಧಾನ ಉಳಿಸುವುದು ಈ ಚುನಾವಣೆಯ ಗುರಿಯಾಗಿದೆ. ಜನರ ಹಿತಾಸಕ್ತಿಯಾಗಿ ಕಾಂಗ್ರೆಸ್ ಸರ್ಕಾರ ಶೇ.50 ರಷ್ಟು ಮೀಸಲಾತಿ ಮಿತಿ ತೆಗೆದುಹಾಕುವುದನ್ನು ಖಾತ್ರಿಪಡಿಸುತ್ತದೆ ಎಂದರು.
ಜಾತಿ ಗಣತಿ ಪರ ಮತ್ತೆ ಬ್ಯಾಟಿಂಗ್ ಮಾಡಿದ ರಾಹುಲ್ ಗಾಂಧಿ, ಇದು ಜನರ ಸ್ಥಿತಿಯ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸುತ್ತದೆ ಮತ್ತು ದೇಶದ ರಾಜಕೀಯದ ದಿಕ್ಕನ್ನು ಬದಲಾಯಿಸುತ್ತದೆ. ಬಿಜೆಪಿ ನಾಯಕರು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಚುನಾವಣೆಯಲ್ಲಿ 400 ಸ್ಥಾನ ಗೆಲ್ಲುವುದಾಗಿ ಘೋಷಿಸಿದ್ದಾರೆ. 400 ಅಲ್ಲ, ಕೇವಲ 150 ಸ್ಥಾನ ಕೂಡಾ ಗೆಲ್ಲಲ್ಲ ಎಂದು ಹೇಳಿದರು.
ಬಿಜೆಪಿ ಹಾಗೂ ಆರ್ ಎಸ್ ಎಸ್ ಸಂವಿಧಾನ ಬದಲಾಯಿಸಲು ಬಯಸಿದ್ದು, ಸಂವಿಧಾನ ರಕ್ಷಣೆಗಾಗಿ ಈ ಚುನಾವಣೆ ಮಹತ್ವದ್ದಾಗಿದೆ. ಕಾಂಗ್ರೆಸ್ ಮತ್ತು ವಿಪಕ್ಷಗಳ ಮೈತ್ರಿಕೂಟ ಸಂವಿಧಾನವನ್ನು ರಕ್ಷಿಸುತ್ತದೆ. ಸಂವಿಧಾನದ ಕಾರಣ ಆದಿವಾಸಿಗಳು, ದಲಿತರು ಮತ್ತು ಒಬಿಸಿಗಳು ಪ್ರಯೋಜನ ಪಡೆಯುತ್ತಿದ್ದಾರೆ.