ಮೈಸೂರು: ರಾಜ್ಯಕ್ಕೆ ಬರಗಾಲ ಬಂದು ಐದು ತಿಂಗಳಾದರೂ ರಾಜ್ಯಕ್ಕೆ ಬರಬೇಕಾದ ರಾಜ್ಯದ ಪಾಲಿನ ಬರ ಪರಿಹಾರ ಒಂದೇ ಒಂದು ರೂಪಾಯಿ ಬಂದಿಲ್ಲ. ಕೆಲವು ಸಮೀಕ್ಷೆಗಳಲ್ಲಿ ಮೈಸೂರು, ಚಾಮರಾಜನಗರ ಸೇರಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂಬ ವರದಿಗಳು ಬಂದಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರು-ಕೊಡಗು ಮತ್ತು ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಜಿಲ್ಲಾ ಮುಖಂಡರು, ಬೋರ್ಡ್ ಅಧ್ಯಕ್ಷರುಗಳು, ಬ್ಲಾಕ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ, ಇವೆರಡೂ ಕಾಂಗ್ರೆಸ್ ಕ್ಷೇತ್ರಗಳು. ಮತ್ತೆ ನಮ್ಮ ‘ಕೈ’ಗೆ ಬರಲೇಬೇಕು, ಬರುತ್ತವೆ. ಹಿಂದಿನ ಬಾರಿ ಕೆಲವು ಕಾರಣಗಳಿಂದಾಗಿ ಅತ್ಯಂತ ಕಡಿಮೆ ಮತಗಳಿಂದ ನಮಗೆ ಹಿನ್ನೆಡೆಯಾಗಿತ್ತು. ಆದರೆ ಈ ಬಾರಿ ಬಿಜೆಪಿ ಪರ ಯಾವ ಕಾರಣಗಳೂ ಇಲ್ಲ ಎಂದರು.
ಸಮೀಕ್ಷೆಗಳಲ್ಲಿ ಮೈಸೂರು, ಚಾಮರಾಜನಗರ ಸೇರಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ- ಸಿಎಂ ಸಿದ್ದರಾಮಯ್ಯ
ಹಲವು ಸಮೀಕ್ಷೆಗಳಲ್ಲಿ ಮೈಸೂರು, ಚಾಮರಾಜನಗರ ಸೇರಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂಬ ವರದಿಗಳು ಬಂದಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ..
ನರೇಂದ್ರ ಮೋದಿ ಸರ್ಕಾರ ಒಂದೇ ಒಂದು ಕೆಲಸವನ್ನೂ ಮಾಡಿಲ್ಲ. ಹೀಗಾಗಿ ಶ್ರೀರಾಮನ ಹೆಸರಲ್ಲಿ ಮತ ಕೇಳುವಂತಾಗಿದೆ. ರಾಮ ಸರ್ವರಿಗೂ ಸೇರಿದವನು. ನನ್ನ ಹೆಸರಲ್ಲೇ ರಾಮ ಇದ್ದಾನೆ. ಬಿಜೆಪಿಯವರಿಗೆ ಜನರ ಬಳಿ ಹೋಗಲು ಮುಖ ಇಲ್ಲ. ಅದಕ್ಕೇ ಕೇವಲ ಮೋದಿಯವರ ಮುಖ ತೋರಿಸಿ ಚುನಾವಣೆ ಮಾಡ್ತೀವಿ ಎಂದು ಹೆಣಗಾಡುತ್ತಿದ್ದಾರೆ ಎಂದು ಟೀಕಿಸಿದರು.
ಶ್ರೀರಾಮಚಂದ್ರ, ಸೀತಾ , ಲಕ್ಷ್ಮಣ ಎಲ್ಲರೂ ನಮಗೆ ಪೂಜ್ಯರು. ಈಗ ಬಿಜೆಪಿ ಕೇವಲ ಜೈ ಶ್ರೀರಾಮ್ ಕೂಗುತ್ತದೆ. ನಾನು ಜೈ ಸೀತಾರಾಮ್ ಎಂದು ನಿರಂತರವಾಗಿ ಕೂಗುತ್ತೇನೆ. ನನ್ನ ಹೆಸರಿನಲ್ಲೇ ರಾಮನಿದ್ದಾನೆ. ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ಸಿಗುತ್ತಿದೆ. ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ಹೇಳಿದ್ದರಲ್ಲಿ ಒಂದನ್ನೂ ಮಾಡಿಲ್ಲ ಎಂದರು.
ಹಿಂದೆ ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗ್ತೀನಿ, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂದಿದ್ದ ದೇವೇಗೌಡರು ಈಗ ಬಿಜೆಪಿ ಜೊತೆ ಸೇರಿದ್ದಾರೆ. ತಮ್ಮ ಅಳಿಯ ಮಂಜುನಾಥ್ ಅವರನ್ನು ಬಿಜೆಪಿಗೆ ಕಳಿಸಿದ್ದಾರೆ. ಮೊದಲು ನೀನು ಹೋಗಿರು, ಆಮೇಲೆ ನಾವೂ ಬರ್ತೀವಿ ಎನ್ನುವ ರೀತಿ ಅಳಿಯನನ್ನು ಬಿಜೆಪಿಗೆ ಕಳಿಸಿದ್ದಾರೆ.





























