ಬೆಳಗಾವಿ ಸುವರ್ಣ ವಿಧಾನಸೌಧ ಡಿ.16 : ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಅಮೃತ್-2.0 ಯೋಜನೆಯಡಿ ಸುಧಾರಿತ ನೀರು ಸರಬರಾಜು ಕಾಮಗಾರಿಯು ಶೇ.70ರಷ್ಟು ಮುಗಿದಿದ್ದು, 2026ರ ಮೇ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ಚಾಲನೆಗೊಳಿಸಲು ಉದ್ದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬಿ ಎಸ್ ಸುರೇಶ ತಿಳಿಸಿದರು.
ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಸದಸ್ಯರಾದ ಶರಣಗೌಡ ಬಯ್ಯಾಪುರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅಮೃತ್-2.0 ಯೋಜನೆಯಡಿ ಲಿಂಗಸುಗೂರು ಪಟ್ಟಣಕ್ಕೆ ಸುಧಾರಿತ ನೀರು ಸರಬರಾಜು ಯೋಜನೆಗೆ ರೂ.9376.00 ಲಕ್ಷಗಳಿಗೆ (ರೂ.8910.00 ಲಕ್ಷಗಳು ಯೋಜನೆ + ರೂ.466.00 ಲಕ್ಷಗಳು ನಿರ್ವಹಣೆ) ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಈ ಕಾಮಗಾರಿಯನ್ನು 18-05-2024ರಂದು ಪ್ರಾರಂಭಿಸಲಾಗಿರುತ್ತದೆ.
ಈ ಯೋಜನೆಯನ್ನು ಟೆಂಡರ್ ಆಧಾರದಡಿ ಮೆ|| ಎಮ್.ಎನ್.ರಮೇಶ, ಇಂಜಿನಿಯರ್ಸ್ ಮತ್ತು ಕಾಂಟ್ರಾಕ್ಟರ್ಸ್, ತುಮಕೂರು ಜೆವಿ ಎ.ಎಮ್ ಕನ್ಸಟ್ರಕ್ಷನ್ಸ್, ತುಮಕೂರು ಇವರಿಗೆ ವಹಿಸಲಾಗಿರುತ್ತದೆ. ಕಾಮಗಾರಿಯ ಸ್ಥಳವನ್ನು ದಿ.18.05.2024 ರಂದು ಗುತ್ತಿಗೆದಾರರಿಗೆ ಹಸ್ತಾಂತರಿಸಲಾಗಿರುತ್ತದೆ. ಈ ಕಾಮಗಾರಿಯು ಪ್ರಗತಿಯಲ್ಲಿದ್ದು, ಶೇ.70 ರಷ್ಟು ಕಾಮಗಾರಿಯು ಪೂರ್ಣಗೊಂಡಿರುತ್ತದೆ. ಈ ಕಾಮಗಾರಿಯ ಕಾಲಾವಧಿ 24 ತಿಂಗಳುಗಳಾಗಿದ್ದು, ದಿ:17.05.2026 ಕಾಮಗಾರಿಯನ್ನು ಪೂರ್ಣಗೊಳಿಸಿ ಚಾಲನೆಗೊಳಿಸಲು ಉದ್ದೇಶಿಸಲಾಗಿದೆ. ಈ ಕಾಮಗಾರಿಗೆ ಇಲ್ಲಿಯವರೆಗೆ ರೂ.3575.00 ಲಕ್ಷಗಳು ಖರ್ಚಾಗಿರುತ್ತದೆ ಎಂದು ಸಚಿವರು ತಿಳಿಸಿದರು.


























