ಕೊಪ್ಪಳ: ಕರ್ನಾಟಕದಲ್ಲಿ ಮುಂದಿನ ಬಾರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತೇನೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಅವರು ಗಂಗಾವತಿಯ ಕನಕಗಿರಿ ರಸ್ತೆಯಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಳಿಕ ಮಾತನಾಡಿ, ನಾನು ಬೆಳಗ್ಗೆ ಚೆನ್ನ ಬಸವ ತಾತ ಮತ್ತು ಗ್ರಾಮದೇವತೆ ದುರ್ಗಾದೇವಿ ಆರ್ಶಿವಾದ ಪಡೆದು ಬಂದಿದ್ದು, ವಿಧಾನಸಭಾ ಕ್ಷೇತ್ರದ ಮತದಾರರು ಕೆಆರ್‌ಪಿಪಿಗೆ ಬೆಂಬಲಿಸಿ ಮತದಾನ ನೀಡುತ್ತಾರೆ ಎಂಬ ಭರವಸೆ ನನ್ನಲ್ಲಿದೆ ಎಂದರು.
ನಾನು ಗಂಗಾವತಿ ವಿಧಾನಸಭಾ ಕ್ಷೇತ್ರದ ಈ ಬಾರಿಯ ಫಲಿತಾಂಶದಲ್ಲಿ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇನೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷವು 13 ಕ್ಷೇತ್ರಗಳಲ್ಲಿ ಸ್ಪಷ್ಟವಾಗಿ ಗೆಲುವು ಸಾಧಿಸಲಿದ್ದು, ಉಳಿದ ಕ್ಷೇತ್ರದಲ್ಲಿ ಪೈಪೋಟಿ ಇರುತ್ತದೆ. ಬಳ್ಳಾರಿ ನಗರದಲ್ಲಿ ಕೆಆರ್‌ಪಿಪಿ ಅಭ್ಯರ್ಥಿ (ಜನಾರ್ಧನ ರೆಡ್ಡಿ ಪತ್ನಿ) ಅರುಣಾ ಲಕ್ಷ್ಮಿ ಸಹ ಗೆಲುವು ಸಾಧಿಸಲಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ ನನಗೆ ಪ್ರತಿಸ್ಪರ್ಧಿ ಯಾರು ಇಲ್ಲ ಎಂದರು.
ವಿಧಾನಸಭಾ ಚುನಾವಣೆ ಬಳಿಕ ಫಲಿತಾಂಶ ಬಂದ ನಂತರ ನಮ್ಮ ಪಕ್ಷ ಯಾವುದಾದರೂ ಒಂದು ಪಕ್ಷಕ್ಕೆ ಬೆಂಬಲ ನೀಡಬೇಕಾದ ಅವಶ್ಯಕತೆ ಇದೆ. ಕಾಂಗ್ರೆಸ್ ಪಕ್ಷ ಬೆಂಬಲಿಸಿಲು ಕೇಳಿದರೆ ಸಿದ್ದರಾಮಯ್ಯ ಸಿಎಂ ಆಗುವ ಸಂದರ್ಭ ಏನಾದರೂ ಇದ್ರೆ ಖಂಡಿತವಾಗಿ ಬೆಂಬಲ ನೀಡುತ್ತೇನೆ ಎಂದು ಹೇಳಿದರು.