ಬೆಂಗಳೂರು: ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಇದೇ ಉಚಿತ ಗ್ಯಾರಂಟಿಗಳ ಮೊರೆ ಹೋಗುವ ಸಾಧ್ಯತೆ ಕಾಂಗ್ರೆಸ್’ಗೆ ಹೊಸ ಅಸ್ತ್ರದಿಂದ ಕಾಂಗ್ರೆಸ್ಸಿಗೆ ಹೆಚ್ಚು ಲಾಭವಾಗುವ ಸಾಧ್ಯತೆ ಸಿದ್ದರಾಮಯ್ಯ ಸರ್ಕಾರದ 5 ಗ್ಯಾರಂಟಿಗಳ ಘೋಷಣೆ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಲು ಸಹಕಾರಿಯಾಗಿದ್ದು, ಈ ಘೋಷಣೆ ರಾಜ್ಯದಲ್ಲಷ್ಟೇ ರಾಷ್ಟ್ರ ರಾಜಕಾರಣದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಮತ್ತು ಜೆಡಿಎಸ್ ಪರಿಣಾಮಕಾರಿ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲು ಮತ್ತು ಕರ್ನಾಟಕ ರಾಜಕೀಯದಲ್ಲಿ ತಮ್ಮ ಸ್ಥಾನಗಳನ್ನು ಮರಳಿ ಪಡೆಯಲು ಕಾರ್ಯಸೂಚಿಯನ್ನು ಹೊಂದಬೇಕು ಎಂದು ಹೇಳಿದ್ದಾರೆ.
ಇನ್ನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಇತರೆ ರಾಜ್ಯಗಳಲ್ಲೂ ವಿಧಾನಸಭಾ ಚುನಾವಣೆಗಳು ಎದುರಾಗಲಿವೆ. ಒಂದು ವೇಳೆ ಕಾಂಗ್ರೆಸ್ 5 ಗ್ಯಾರಂಟಿಗಳ ಘೋಷಣೆ ಮಾಡದೇ ಹೋಗಿದ್ದರೆ ಇದನ್ನು ದಾಳವಾಗಿ ಬಳಸಿಕೊಳ್ಳಲು ಬಿಜೆಪಿ ಹಾಗೂ ಜೆಡಿಎಸ್ ತಂತ್ರಗಳ ರೂಪಿಸಿತ್ತು. ಆದರೀಗ ಸರ್ಕಾರ ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಪಕ್ಷವನ್ನು ಎದುರಿಸುವುದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕರ್ನಾಟಕದ ಉಚಿತ ಗ್ಯಾರಂಟಿಗಳ ಮಾದರಿಯಿಂದ ಪ್ರೇರಣೆ ಪಡೆದು ಶೀಘ್ರದಲ್ಲೇ ವಿಧಾನಸಭಾ ಚುನಾವಣೆಯ ನಿರೀಕ್ಷೆಯಲ್ಲಿರುವ ರಾಜಸ್ಥಾನದಲ್ಲಿ ಅಲ್ಲಿನ ಕಾಂಗ್ರೆಸ್ ಸರ್ಕಾರವು ಕೂಡಲೇ ಜಾರಿಗೆ ಬರುವಂತೆ 100 ಯುನಿಟ್ ಗಳವರೆಗೆ ಉಚಿತ ವಿದ್ಯುತ್ ಪ್ರಕಟ ಮಾಡಿದೆ. ಜೊತೆಗೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲೂ ಉಚಿತ ಕೊಡುಗೆಗಳ ಘೋಷಣೆ ಜೋರಾಗಿದೆ.
ಇನ್ನು ಮುಂದಿನ ದಿನಗಳಲ್ಲಿ ಚುನಾವಣೆಗೆ ಸಜ್ಜಾಗಲಿರುವ ಮಧ್ಯಪ್ರದೇಶ, ಛತ್ತೀಸ್ಗಢ, ತೆಲಂಗಾಣದಂತಹ ರಾಜ್ಯಗಳಲ್ಲೂ ಈ ಉಚಿತ ಯೋಜನೆಗಳು ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುವ ಸಾಧ್ಯತೆಗಳಿವೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ನಿರೀಕ್ಷೆಗಿಂತಲೂ ವೇಗ ಹಾಗೂ ಸಮರ್ಪಕವಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಘೋಷಣೆ ಮಾಡಿದೆ. ಈ ಮೂಲಕ ಹೊಸ ಕರ್ನಾಟಕ ಮಾದರಿ ರಾಜಕೀಯಕ್ಕೆ ಮುನ್ನುಜಿ ಬರೆದಿದ್ದು, ಕರ್ನಾಟಕ ಗ್ಯಾರಂಟಿ ಮಾದರಿಯ ಬೇರೆ ರಾಜ್ಯಗಳಿಗೂ ಮಾದರಿಯಾಗಿ ರಾಷ್ಟ್ರ ರಾಜಕೀಯದಲ್ಲಿ ಸ್ಥಿತ್ಯಂತರ ಸೃಷ್ಟಿಸುವ ಸಾಧ್ಯತೆಗಳಿವೆ. ಮತದಾರರು ಗ್ಯಾರಂಟಿ ಯೋಜನೆಗಳಿಗೆ ಈ ಪರಿ ಮನ ಸೋಲುವುದು ಖಾತ್ರಿಯಾಗಿರುವುದರಿಂದ ಬೇರೆ ರಾಜ್ಯಗಳು ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಇದೇ ಉಚಿತ ಗ್ಯಾರಂಟಿಗಳ ಮೊರೆ ಹೋಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇನ್ನು ಬಿಜೆಪಿ ಪಕ್ಷವನ್ನು ಸಂಘಟಿಸುವ ಪ್ರಯತ್ನವನ್ನು ಮರಳಿ ಆರಂಭಿಸಬೇಕು. ಪಕ್ಷದಿಂದ ದೂರ ಉಳಿದಿರುವ ವೀರಶೈವ-ಲಿಂಗಾಯತ ಮತ್ತು ಇತರ ಜಾತಿಗಳನ್ನು ಮರಳಿ ತನ್ನತ್ತ ಸೆಳೆಯುವತ್ತ ಶ್ರಮಿಸಬೇಕು. ಪಕ್ಷದಲ್ಲಿರುವ ನಾಯಕತ್ವದ ಸಮಸ್ಯೆಗಳನ್ನು ಪರಿಹರಿಸಬೇಕು ಮತ್ತು ಆಂತರಿಕ ಕಚ್ಚಾಟವನ್ನು ಕೊನೆಗೊಳಿಸಬೇಕು ಎಂದು ತಿಳಿಸಿದ್ದಾರೆ.