ಹಾರೂಗೇರಿ: ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಈ ಸರ್ಕಾರದಿಂದ ರಾಜ್ಯಕ್ಕೆ ಕೆಟ್ಟು ಹೆಸರು ಬಂದಿದ್ದು, ಇಂತಹ ಭ್ರಷ್ಟ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ಗಸ್ತಿ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಪಿ.ರಾಜೀವ್ ಲಂಬಾಣಿ ಸಮುದಾಯದವರು. ಆದರೆ ಬಿಜೆಪಿ ಸರ್ಕಾರದಲ್ಲಿದ್ದ ಪಿ. ರಾಜೀವ್ ಅವರು ಲಂಬಾಣಿ ಸಮುದಾಯಕ್ಕೆ ಹಾಗೂ ಕುಡಚಿ ಮತಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಪಿ. ರಾಜೀವ್ ದೊಡ್ಡ ಸುಳ್ಳುಗಾರ. ಅವನು ಸತ್ಯ ಹೇಳುವುದಕ್ಕಿಂತ ಸುಳ್ಳುಗಳನ್ನೆ ಜಾಸ್ತಿ ಹೇಳುತ್ತಾನೆ. ಅದ್ದರಿಂದ ಕುಡಚಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ್ ಅವರನ್ನು ಗೆಲ್ಲಿಸಿ, ಪಿ. ರಾಜೀವ್ ನನ್ನು ಭಾರೀ ಅಂತರದಿಂದ ಸೋಲಿಸಬೇಕೆಂದು ಎಂದು ಹೇಳಿದರು.
ರಾಜ್ಯದಲ್ಲಿ 40 % ಕಮಿಷನ್ ಪಡೆಯುವುದೇ ಬಿಜೆಪಿಯವರ ಕಾಯಕವಾಗಿದೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ಕಮಿಷನ್ ಕಾಟದಿಂದ ಆತ್ಮಹತ್ಯೆ ಮಾಡಿಕೊಂಡರು. ಈಶ್ವರಪ್ಪ ಅವರ ಹೆಸರಿನಲ್ಲಿ ಸಂತೋಷ ಪಾಟೀಲ್ ಡೆತ್ ನೋಟ್ ಬರೆದು ಸತ್ತಿದ್ದಾರೆ. ಆದರೆ ಸಿಎಂ ಬೊಮ್ಮಾಯಿ ವಿಧಾನಸಭೆಯಲ್ಲಿ ನಿಮ್ಮ ಕಡೆ ಏನು ದಾಖಲೆ ಇದೆ ಎಂದು ಕೇಳುತ್ತಾರೆ. ಇಂತಹ ಭ್ರಷ್ಟ ಬಿಜೆಪಿಯವರನ್ನು ಮನೆಗೆ ಕಳುಹಿಸಬೇಕೆಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಗೃಹಜ್ಯೋತಿ ಯೋಜನೆ, ಅನ್ನಭ್ಯಾಗ್ಯ ಯೋಜನೆಯಡಿ ೧೦ ಕೆಜಿ ಅಕ್ಕಿ, ಗೃಹಲಕ್ಷ್ಮಿ ಕುಟುಂಬದ ಪ್ರತಿ ಮಹಿಳೆಗೆ ಪ್ರತಿ ತಿಂಗಳು ಎರಡು ಸಾವಿರ ರೂ.,ಪದವೀಧರರಿಗೆ ಪ್ರತಿ ತಿಂಗಳು 3000 ನಿರುದ್ಯೋಗ ಭತ್ಯೆಗಳನ್ನು ಉಚಿತವಾಗಿ ನೀಡಲಾಗುವುದು. ಸದೃಢ ಹಾಗೂ ಸುರಕ್ಷಿತ ಕುಟುಂಬಕ್ಕಾಗಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ತರುವಂತೆ ವಿನಂತಿಸಿದರು.