ಬೆಳಗಾವಿ: ಭಾರತ ದೇಶ ಕಂಡ ಅಪ್ರತಿಮ ರಾಜಕೀಯ ಮುತ್ಸದ್ಧಿ,
ನಾಯಕ , ಮೌಲ್ಯಾಧಾರಿತ ಸೃಜನಶೀಲ ರಾಜಕಾರಣಿ, ಕೇಂದ್ರದ ಮಾಜಿ ಸಚಿವ , ಕನ್ನಡ ನಾಡಿನ ಮಾಜಿ ಮುಖ್ಯಮಂತ್ರಿ ಮಾನ್ಯಶ್ರೀ ಎಸ್.ಎಮ್. ಕೃಷ್ಣ ಅವರ ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಮಾನ್ಯಶ್ರೀ ಬಸವರಾಜ ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ಶೋಕ ಸಂದೇಶದಲ್ಲಿ ಅವರು,
ರಾಜ್ಯಸಭೆ, ಲೋಕಸಭೆ, ವಿಧಾನ ಪರಿಷತ್ ಹಾಗೂ ವಿಧಾನ ಸಭೆಯ ಸದಸ್ಯರಾಗಿ, ರಾಜ್ಯಪಾಲರಾಗಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಎಸ್.ಎಮ್ ಕೃಷ್ಣ ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಕರ್ನಾಟಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಅದರಲ್ಲೂ ಬೆಂಗಳೂರು ನಗರದ ಅಭಿವೃದ್ಧಿಯ ಹರಿಕಾರರಾಗಿದ್ದ ಮಾನ್ಯರು, ಜಗತ್ತಿನ ಭೂಪಟದಲ್ಲಿ ಬೆಂಗಳೂರಿನ ಹೆಸರನ್ನು ಚಿರಸ್ಥಾಯಿಗೊಳಿಸಿ ಬ್ರಾಂಡ್ ಬೆಂಗಳೂರಿನ ಪ್ರವರ್ತಕರಾಗಿ ಅದರ ಬೆಳವಣಿಗೆಗೆ ಶ್ರಮಿಸಿದ ಪರಿ ಅನನ್ಯವಾದುದು
ಎಂದು ಬಸವರಾಜ ಹೊರಟ್ಟಿ , ಕೃಷ್ಣ ಅವರ ಅಭಿವೃದ್ಧಿ ಪರ ಚಿಂತನೆಗಳು, ದೂರದೃಷ್ಟಿ, ಹಾಗೂ ಅವರು ರಾಜ್ಯದ ಅಭಿವೃದ್ಧಿ ಬೆಗೆಗೆ ಹೊಂದಿದ್ದ ಕಾಳಜಿಯನ್ನು ಬಣ್ಣಿಸಿದ್ದಾರೆ.
ಸಂಗೀತ, ಯೋಗ ಹಾಗೂ ಲಾನ್ ಟೆನ್ನಿಸ್ ಆಟದಲ್ಲಿ ವಿಶೇಷವಾದ ಆಸಕ್ತಿಹೊಂದಿದ್ದ ಶ್ರೀಯುತರು, ಮಿತಭಾಷಿ ಹಾಗೂ ಸೌಮ್ಯ ಸ್ವಭಾವದ ಅತ್ಯುತ್ತಮ ಆಡಳಿತಗಾರರಾಗಿದ್ದ ನಾಡು ಕಂಡ
ಅಪರೂಪದ ರಾಜಕಾರಣಿಗಳಾಗಿದ್ದರು ಎಂದು ಬಸವರಾಜ ಹೊರಟ್ಟಿ ಕೃಷ್ಣ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.
ವಯಕ್ತಿಕವಾಗಿ ಅತೀವ ಆತ್ಮೀಯತೆ ಹೊಂದಿದ್ದ ತಾವು, ಅವರೊಂದಿಗೆ
ರಾಜ್ಯದ ಅಭಿವೃದ್ಧಿಗೆ ಸಂಬಧಿಸಿದಂತೆ, ಉತ್ತರ ಕರ್ನಾಟಕದ ಹಲವು ಯೋಜನೆಗಳ ಕುರಿತಂತೆ
ಹಲವು ಬಾರಿ ಚರ್ಚಿಸಿದ್ದನ್ನು ನೆನಪಿಸಿಕೊಂಡಿರುವಬಸವರಾಜ ಹೊರಟ್ಟಿಯವರು,
ಕೃಷ್ಣ ಅವರ ಸರಳತೆ, ಸಜ್ಜನಿಕೆ, ದೂರದರ್ಶಿತ್ವ, ಅಭಿವೃದ್ಧಿ ಬಗೆಗಿನ ಚಿಂತನೆಗಳು, ಭಾಷಾ ಬಳಕೆ ಮುಂತಾದ ಉದಾತ್ತ ಗುಣಗಳು ಇಂದಿನ ರಾಜಕಾರಣಿಗಳಿಗೆ ಅನುಕರಣೀಯವಾಗಿವೆ ಎಂದಿದ್ದಾರೆ.
ಶ್ರೀಯುತರ ಅಗಲಿಕೆಯಿಂದ ನಮ್ಮ ರಾಜ್ಯವು ಸೇರಿದಂತೆ ದೇಶವು ಹಿರಿಯ ಮುತ್ಸದ್ದಿ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ, ಎಸ್.ಎಂ.ಕೃಷ್ಣ ಅವರ ಅಗಲಿಕೆಯಿಂದ, ಅವರ ಕುಟುಂಬ ವರ್ಗದವರಿಗೆ ಮತ್ತು ಅಪಾರ ಅಭಿಮಾನಿ ಬಂಧುಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಹಾಗೂ ಅವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ
ಬಸವರಾಜ ಹೊರಟ್ಟಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.