ಬೆಂಗಳೂರು:ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ನಿರ್ಮಲಾ ಅವರು ಸುಳ್ಳು ಹೇಳುತ್ತಿದ್ದಾರೆ.ತೆರಿಗೆ ಹಣ ಹಾಗೂ ಬರ ಪರಿಹಾರ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವಿನ ಜಟಾಪಟಿ ಮುಂದುವರೆದಿದ್ದು, ಉದ್ದೇಶಪೂರ್ವಕವಾಗಿ ಎಸ್ಡಿಆರ್ಎಫ್-ಎನ್ಡಿಆರ್ಎಫ್ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗೊಂದಲ ಸೃಷ್ಟಿಸುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಸುಳ್ಳುಗಳ ಮೇಲೆಯೇ ರಾಜಕಾರಣ ನಡೆಸುತ್ತಾ ಬಂದಿರುವ ಬಿಜೆಪಿ ಪಕ್ಷಕ್ಕೆ ಸತ್ಯ ಹೇಳಿ ಅಭ್ಯಾಸವೇ ಇಲ್ಲ. ಮೊನ್ನೆ ಕೇಂದ್ರ ಗೃಹ ಸಚಿವರಾದ ಬಂದು ಸುಳ್ಳುಗಳನ್ನು ಉದುರಿಸಿ ಹೋಗಿದ್ದರು. ಈಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಅವರು ಬಂದು ಹಳೆಯ ಸುಳ್ಳುಗಳನ್ನು ಪುನರಾವರ್ತಿಸಿದ್ದಾರೆ. ಆದರೆ, ಕರ್ನಾಟಕದ ಪ್ರಜ್ಞಾವಂತ ಜನತೆಗೆ ಸತ್ಯ ತಿಳಿದಿದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯಗಳು ಮನದಟ್ಟಾಗಿದೆ ಎಂದು ಹೇಳಿದ್ದಾರೆ.
ಈಗಲೂ ಕಾಲ ಮಿಂಚಿಲ್ಲ, ನಿರ್ಮಲಾ ಅವರೇ, ದಯವಿಟ್ಟು ಮಾಡಿರುವ ತಪ್ಪನ್ನು ಒಪ್ಪಿಕೊಂಡು ಕರ್ನಾಟಕಕ್ಕೆ ನ್ಯಾಯಯುತವಾಗಿ ನೀಡಬೇಕಾಗಿರುವ ಬರಪರಿಹಾರ ಮತ್ತು ತೆರಿಗೆ ಪಾಲನ್ನು ಕೊಟ್ಟುಬಿಡಿ. ಮತ್ತೆ ಮತ್ತೆ ಸುಳ್ಳುಗಳ ಮೂಲಕ ನಿಮ್ಮ ವೈಫಲ್ಯವನ್ನು ಸಮರ್ಥಿಸಿಕೊಳ್ಳಲು ಹೋಗಬೇಡಿ. ಕೇಂದ್ರ ಸರ್ಕಾರ ಬರಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ರೂ.697 ಕೋಟಿ ನೀಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದರೆ, ಇಷ್ಟು ಹೇಳುವಾಗ ನಿಜವಾದ ಸತ್ಯವನ್ನು ಬಚ್ಚಿಟ್ಟಿದ್ದಾರೆ.
ಪ್ರಕೃತಿ ವಿಕೋಪದ ಪರಿಹಾರಕ್ಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಎರಡು ನಿಧಿಗಳಿವೆ. ಮೊದಲನೆಯದು ಎಸ್ ಡಿಆರ್ ಎಫ್, ಎರಡನೆಯದ ಎನ್ ಡಿಆರ್ ಎಫ್. ಸಾಮಾನ್ಯ ಸ್ವರೂಪದ ಪ್ರಕೃತಿ ವಿಕೋಪಕ್ಕೆ ಎಸ್ ಡಿಆರ್ ಎಫ್ ನಿಂದ ಪರಿಹಾರ ನೀಡಲಾಗುವುದು. ಈ ನಿಧಿಯಡಿಯಲ್ಲಿ ನೀಡುವ ಪರಿಹಾರದಲ್ಲಿ ಶೇಕಡಾ 75ರಷ್ಟು ಪಾಲನ್ನು ಕೇಂದ್ರ ನೀಡಿದರೆ ಉಳಿದ ಶೇಕಡಾ 25ರ ಪಾಲನ್ನು ರಾಜ್ಯ ಸರ್ಕಾರ ನೀಡುತ್ತದೆ. ಇದರಡಿಯ ಪರಿಹಾರದ ಮೊತ್ತವನ್ನು ಕೇಂದ್ರ ಹಣಕಾಸು ಆಯೋಗ ನಿರ್ಧಾರ ಮಾಡುತ್ತದೆ.
ಕರ್ನಾಟಕ ಈ ಬಾರಿ ಎಂದೂ ಕಂಡರಿಯದ ನಷ್ಟವನ್ನು ಬರಗಾಲದಿಂದಾಗಿ ಅನುಭವಿಸುತ್ತಿದೆ. ನಮ್ಮ 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರಗಾಲಕ್ಕೀಡಾಗಿವೆ. ರಾಜ್ಯದ 48 ಲಕ್ಷ ಹೆಕ್ಟೇರ್ ಪ್ರದೇಶದ 34 ಲಕ್ಷ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ನಮ್ಮ ರೈತರಿಗೆ ಆಗಿರುವ ನಷ್ಟ ರೂ.37,000 ಕೋಟಿಗೂ ಹೆಚ್ಚಿನದ್ದಾಗಿದೆ. ಕೇಂದ್ರ ಬಿಜೆಪಿ ಸರ್ಕಾರದಿಂದ ನಾವು ಕೇಳುತ್ತಿರುವ ಪರಿಹಾರ ಕೇವಲ ರೂ.18,171 ಕೋಟಿ. ಈ ಪರಿಹಾರವನ್ನು ಎನ್ ಡಿಆರ್ ಎಫ್ ನಿಂದಲೆ ಕೊಡಬೇಕಾಗುತ್ತದೆ. ಈ ಸತ್ಯವನ್ನು ನಿರ್ಮಲಾ ಅವರು ಬಚ್ಚಿಡುತ್ತಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಬರಪರಿಹಾರಕ್ಕಾಗಿ ಎನ್ ಡಿಆರ್ ಎಫ್ ನಿಂದ ರೂ.18,171 ಕೋಟಿ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಕೇಂದ್ರ ತಜ್ಞರ ತಂಡ ಬಂದು ಅಧ್ಯಯನ ನಡೆಸಿ ವರದಿಯನ್ನೂ ಕೊಟ್ಟಿದ್ದಾರೆ. ಅದರ ನಂತರ ನಾನು ಕಂದಾಯ ಸಚಿವರೊಂದಿಗೆ ಬಂದು ಪ್ರಧಾನಿ ಮೋದಿ ಮತ್ತು ಗೃಹಸಚಿವರನ್ನು ಭೇಟಿ ಮಾಡಿದ್ದೆವು. ನಮ್ಮ ಉಪಮುಖ್ಯಮಂತ್ರಿಗಳು ಬಂದು ನಿಮ್ಮನ್ನೂ ಭೇಟಿ ಮಾಡಿದ್ದರು. ಹೀಗಿದ್ದರೂ ಬರಪರಿಹಾರದ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿರುವ ಗೃಹ ಸಚಿವರ ನೇತೃತ್ವದ ಉನ್ನತಾಧಿಕಾರ ಸಮಿತಿ ಸಭೆಯನ್ನೇ ಇಲ್ಲಿಯ ವರೆಗೆ ನಡೆಸದೆ ಇರುವುದು ಕೇಂದ್ರ ಸರ್ಕಾರದ ಉದ್ದೇಶಪೂರ್ವಕ ಅನ್ಯಾಯ ಅಲ್ಲವೇ? ಎಂದಿದ್ದಾರೆ.
ತೆರಿಗೆ ಹಂಚಿಕೆ ಮತ್ತು ಜಿಎಸ್ ಟಿ ಪರಿಹಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಪರಿಗಣಿಸಿ ಕೇಂದ್ರ ಹಣಕಾಸು ಆಯೋಗ ರೂ.5,495 ಕೋಟಿ ವಿಶೇಷ ಅನುದಾನ ನೀಡಬೇಕೆಂದು ಶಿಫಾರಸು ಮಾಡಿತ್ತು. ಇದಲ್ಲದೆ ಬೆಂಗಳೂರಿನ ಫೆರಿಫೆರಲ್ ರಿಂಗ್ ರಸ್ತೆಗೆ ರೂ.3,000 ಕೋಟಿ ಮತ್ತು ಕೆರೆಗಳು ಸೇರಿದಂತೆ ಬೆಂಗಳೂರು ಜಲಮೂಲ ಅಭಿವೃದ್ಧಿಗೆ ರೂ. 3000 ನೀಡಲು ಶಿಫಾರಸ್ಸು ಮಾಡಿತ್ತು. ಆದರೆ, ಈ ಶಿಫಾರಸ್ಸುಗಳನ್ನು ತಿರಸ್ಕರಿಸಿದ ಹಣಕಾಸು ಸಚಿವರಾದ ನಿರ್ಮಲಾ ಅವರು ರಾಜ್ಯಕ್ಕೆ ಸುಮಾರು ರೂ.11,495 ಕೋಟಿ ನೀಡದೆ ಅನ್ಯಾಯ ಮಾಡಿದ್ದಾರೆ.