ಪುಣ್ಯಕ್ಷೇತ್ರ ದರ್ಶನದಿಂದ ಜೀವನ ಪಾವನವಾಗುತ್ತದೆ; ಡಾ.ಡಿ.ಎಂ.ಹಿರೇಮಠ*

ಪುಣ್ಯಕ್ಷೇತ್ರ ದರ್ಶನದಿಂದ ಜೀವನ ಪಾವನವಾಗುತ್ತದೆ; ಡಾ.ಡಿ.ಎಂ.ಹಿರೇಮಠ*

 

ಧಾರವಾಡ, ಆಗಸ್ಟ್, 26: ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸಾಧು, ಸಂತರು, ಶಿವಯೋಗಿ, ಜಗದ್ಗುರುಗಳು ತಪಸ್ಸುಗೈದು, ನೆಲಿಸಿದ್ದ ಪುಣ್ಯಕ್ಷೇತ್ರಗಳಿಗೆ ಹೋಗಿ ದರ್ಶನ ಪಡೆಯುವದರಿಂದ ಅವರ ಬದುಕು ಪಾವನವಾಗುತ್ತದೆ ಎಂದು ದ‌.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಹೇಳಿದರು.

ಅವರು ಇಂದು ಮಧ್ಯಾಹ್ನ ಧಾರವಾಡ ವೀರಶೈವ ಜಂಗಮ ಸಂಸ್ಥೆಯ ಪಂಚಪೀಠ ದರ್ಶನ ಪ್ರವಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ಬಾಳೆಹೊನ್ನುರು ರಂಭಾಪುರಿ ಶ್ರೀ ಪೀಠ ದರ್ಶನ ಪ್ರವಾಸ ವಾಹನಕ್ಕೆ ಹಸಿರು ಬಾವುಟ ತೋರಿ, ಚಾಲನೆ ನೀಡಿ, ಮಾತನಾಡಿದರು.

ಪ್ರತಿ ಧರ್ಮಿಯರಿಗೂ ಗುರು, ಕ್ಷೇತ್ರಗಳಿರುತ್ತವೆ. ತಪ್ಪದೇ ಒಮ್ಮೆಯಾದರೂ ಭೇಟಿ ನೀಡಿ, ಭಕ್ತಿ ಸೇವೆ ಮಾಡಬೇಕು. ಪವಿತ್ರ ಶ್ರಾವಣ ಮಾಸದಲ್ಲಿ ಗುರು, ದೇವರ ಸಾನಿಧ್ಯ ಬಯಸುವದರಿಂದ ಜೀವನ ಕ್ರಮ ಶುದ್ಧವಾಗುತ್ತದೆ ಎಂದು ಅವರು ಹೇಳಿದರು.

ಶ್ರಾವಣ ಮಾಸ ವೀರಶೈವ ಲಿಂಗಾಯತರಿಗೆ ಬಹು ಮುಖ್ಯವಾಗಿದೆ. ಪೂಜಾನಿಷ್ಠರು ಈ ಮಾಸದಲ್ಲಿ ಕಠಿಣ ಪರಿಶ್ರಮದಿಂದ ಸಾಧನೆ ಮಾಡುತ್ತಾರೆ. ಸಾತ್ವಿಕ ಜೀವನ ವೀರಶೈವರಿಗೆ ಆಧ್ಯಾತ್ಮಿಕ ಶಕ್ತಿ ನೀಡುತ್ತದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಪಂಚಪೀಠ ಧರ್ಮನಿಷ್ಠ ಧುರೀಣ ಬಸವರಾಜ ಕೌಜಲಗಿ ಮಾತನಾಡಿ, ವೀರಶೈವ ಲಿಂಗಾಯತ ಧರ್ಮ ಸಂರಕ್ಷಣೆಗೆ ಸದಾ ಸಂಚರಿಸಿ, ಶ್ರಮಿಸುತ್ತಿರುವ ಪಂಚಪೀಠಾಧೀಶ್ವರರು ನೆಲೆಸಿದ ಕ್ಷೇತ್ರಗಳು ಅತ್ಯಂತ ಪವಿತ್ರವಾಗಿವೆ. ಅವರ ಜಪತಪಗಳ ಫಲವಾಗಿ ಸದ್ಧರ್ಮದ ಸಂವರ್ಧನೆ ಆಗುತ್ತಿದೆ ಎಂದರು.
ಧಾರವಾಡ ವೀರಶೈವ ಜಂಗಮ ಸಂಸ್ಥೆಯ ಈ ಕಾರ್ಯಕ್ರಮ ವಿಶೇಷವಾಗಿದೆ. ಬಾಳೆಹೊನ್ನುರು ರಂಭಾಪುರಿ ಶ್ರೀ ಪೀಠ ಜಾಗೃತ ಕ್ಷೇತ್ರ. ರೇಣುಕರ ದರ್ಶನ, ಜಗದ್ಗುರುಗಳ ಆಶೀರ್ವಾದ ಪಡೆಯುವುದರಿಂದ ಬದುಕು ಸುಂದರವಾಗುತ್ತದೆ ಎಂದರು‌.

ಸಂಸ್ಥೆಯ ಹಿರಿಯ ನಿರ್ದೇಶಕ ಡಾ.ಎಸ್.ಜಿ.ಮಠದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಎಂ.ಹಿರೇಮಠ, ಕೋಶಾಧಿಕಾರಿ ಪಿ.ಎಸ್.ಹಿರೇಮಠ, ವೇದಮೂರ್ತಿ ಬಸಯ್ಯ ಹಿರೇಮಠ, ಚಿದಾನಂದಯ್ಯ ಹಿರೇಮಠ, ಕುಮಾರ ಕಡ್ಲಿಮಠ, ಶಿಕ್ಷಕರಾದ ಸಿ.ಸಿ.ಹಿರೇಮಠ, ಗ್ರಾಮ ಆಡಳಿತ ಅಧಿಕಾರಿ ವೇಂಕಟೇಶ ಹಟ್ಟಿಯವೆ, ಮಹಾಂತೇಶ ಬೆಳಹಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.