ಬೆಂಗಳೂರು: ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿ ಮಾಡುವ ವಿಚಾರವು ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯ ಭಾಗವಾಗಿರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್‌ನ ಹಲವು ಮುಖಂಡರನ್ನು ತಮ್ಮ ನಿವಾಸದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಎರಡು ದಿನಗಳಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು.
ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ, ಮಲೆನಾಡು ಮತ್ತು ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆಗಳನ್ನು ನೀಡಲಾಗುವುದು’ ಎಂದರು.
200 ಯುನಿಟ್‌ವರೆಗೆ ಉಚಿತ ವಿದ್ಯುತ್, ಮನೆಯ ಯಜಮಾನಿಗೆ ತಿಂಗಳಿಗೆ ₹ 2,000, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪ್ರತೀ ಸದಸ್ಯರಿಗೆ ತಿಂಗಳಿಗೆ 10 ಕೆ.ಜಿ. ಅಕ್ಕಿ, ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪಾಸ್ ಮತ್ತು ನಿರುದ್ಯೋಗಿ ಯುವಜನರಿಗೆ ನಿರುದ್ಯೋಗ ಭತ್ಯೆಯ ಘೋಷಣೆಗಳು ಪ್ರಣಾಳಿಕೆಯಲ್ಲಿ ಇರುತ್ತವೆ. ಪಕ್ಷ ಅಧಿಕಾರಕ್ಕೆ ಬಂದರೆ ಈ ಯೋಜನೆಗಳ ಅನುಷ್ಠಾನಕ್ಕೆ ಮೊದಲ ಸಂಪುಟ ಸಭೆಯಲ್ಲೇ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
‘ಉಚಿತ ಕೊಡುಗೆಗಳಿಗೆ ಸಂಪನ್ಮೂಲವನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎಂದು ಬಿಜೆಪಿ ಪ್ರಶ್ನೆ ಮಾಡುತ್ತಿದೆ. ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟಾಚಾರ ನಿಲ್ಲಿಸಿದರೆ ಈ ಯೋಜನೆಗಳಿಗೆ ಅಗತ್ಯವಿರುವಷ್ಟು ಆರ್ಥಿಕ ಸಂಪನ್ಮೂಲ ದೊರಕುತ್ತದೆ’ ಎಂದರು.