ಪಾಟ್ನಾ: ಕಳವಾಗಿ, ಪತ್ತೆಯಾದ ಬಳಿಕ ಪೊಲೀಸ್ ಕಸ್ಟಡಿಯಲ್ಲಿದ್ದ ಆಂಜನೇಯ ವಿಗ್ರಹವನ್ನು 29 ವರ್ಷಗಳ ಬಳಿಕ ಕೋರ್ಟಿನ ಆದೇಶದ ಮೇರೆಗೆ ದೇವಸ್ಥಾನಕ್ಕೆ ತಂದು ಪುನಃ ಸ್ಥಾಪಿಸಲಾಗಿರುವ ಘಟನೆ ಬಿಹಾರದ ಭೋಜ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಮೇ.29,1994 ರಂದು ಅಷ್ಟಧಾತುವಿನಿಂದ ಮಾಡಿದ ಆಂಜನೇಯ ವಿಗ್ರಹವನ್ನು ಬರ್ಹರಾ ಬ್ಲಾಕ್‌ನ ಗುಂಡಿ ಗ್ರಾಮದಲ್ಲಿನ ಶ್ರೀರಂಗನಾಥ ದೇವಾಲಯದಿಂದ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಅಂದಿನ ದೇವಾಲಯದ ಅರ್ಚಕ ಜನೇಶ್ವರ್ ದ್ವಿವೇದಿ ಅವರು ವಿಗ್ರಹ ಕಳ್ಳತನದ ಆರೋಪದ ಮೇಲೆ ಅಪರಿಚಿತ ಕಳ್ಳರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ತನಿಖೆಯ ನಂತರ ಪೊಲೀಸರು ಕಳ್ಳತನವಾದ ವಿಗ್ರಹಗಳನ್ನು ಬಾವಿಯಲ್ಲಿ ಪತ್ತೆ ಹಚ್ಚಿ ಠಾಣೆಯ ಸ್ಟ್ರಾಂಗ್ ರೂಮ್ ನಲ್ಲಿಟ್ಟಿದ್ದರು.
ಬಿಹಾರ ರಾಜ್ಯ ಧಾರ್ಮಿಕ ಟ್ರಸ್ಟ್ ಬೋರ್ಡ್ ಕೂಡ ಈ ಬಗ್ಗೆ ಪಾಟ್ನಾ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಿ, ಎಲ್ಲಾ ವಶಪಡಿಸಿಕೊಂಡ ವಿಗ್ರಹಗಳನ್ನು ಟ್ರಸ್ಟ್‌ಗೆ ಹಿಂದಿರುಗಿಸಲು ಹೇಳಿದೆ.