- ಧಾರವಾಡ ಸೆ.25: ಜನರ ಆಶೋತ್ತರಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿರುವ ರಾಜ್ಯ ಸರಕಾರದ ಮತ್ತೊಂದು ಜನಪರ ಕಾರ್ಯಕ್ರಮ ಜನತಾದರ್ಶನವಾಗಿದೆ. ಜನತಾದರ್ಶನದಲ್ಲಿ ಸಲ್ಲಿಕೆ ಆಗುವ ಪ್ರತಿ ಅರ್ಜಿಯನ್ನು ಸ್ಥಳದಲ್ಲಿ ಪರಿಶೀಲಿಸಿ, ಪರಿಹಾರಕ್ಕೆ ಅಗತ್ಯ ಕ್ರಮ ಜರುಗಿಸಲಾಗುವುದು. ಪ್ರತಿ ಅಹವಾಲುಗಳ ವಿವರವು ರಾಜ್ಯಮಟ್ಟದಲ್ಲಿಯೂ ಪೊರ್ಟಲ್ ದಲ್ಲಿ ನೋಂದಣಿ ಆಗುತ್ತದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಕೆಸಿಡಿ ಆವರಣದ ಡಾ.ಅಣ್ಣಾಜೀರಾವ್ ಶಿರೂರ ಸೃಜನಾ ರಂಗಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಜನರ ಸಮಸ್ಯೆಗಳನ್ನು ಆಯಾ ಇಲಾಖೆ, ಜಿಲ್ಲೆ, ಅಧಿಕಾರಿಗಳ ಹಂತದಲ್ಲಿ ಆಲಿಸಿ, ನಿಯಮಾನುಸಾರ ಪರಿಹರಿಸಲು ಅಧಿಕಾರಿಗಳು ಕ್ರಮವಹಿಸಬೇಕು. ಜಿಲ್ಲೆಯ ಹಿರಿಯ ಶಾಸಕರಾದ ಎನ್.ಎಚ್.ಕೋನರಡ್ಡಿ , ಅಬ್ಬಯ್ಯ ಪ್ರಸಾದ ಅವರು ಜನರ ಸಮಸ್ಯೆಗಳನ್ನು, ಕುಂದುಕೊರತೆಗಳನ್ನು ಪರಿಹರಿಸಲು ಪ್ರತಿ ವಾರ ಸಾರ್ವಜನಿಕರ ಭೇಟಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ಮಾದರಿ ಕ್ರಮ ಎಂದರು.
ತಾವು ಮಂತ್ರಿಗಳಾಗಿ, ಜಿಲ್ಲಾ ಉಸ್ತುವಾರಿ ಸಚಿವರಾದ ತಕ್ಷಣ ಜಿಲ್ಲೆಯಲ್ಲಿ ಸಂಚರಿಸಿ, ಜನರ ಸಮಸ್ಯೆಗಳಿಗೆ ಧ್ವನಿ ಆಗಲು ಪ್ರಯತ್ನಿಸಿದ್ದೇನೆ. ಧಾರವಾಡ ಜಿಲ್ಲೆಯಲ್ಲಿಯೇ ಹೆಚ್ಚು ಸಮಯ ಇದ್ದು, ನಿತ್ಯ ಸಾವಿರಾರು ಜನರ ಅಹವಾಲುಗಳನ್ನು ಆಲಿಸಿ, ಪರಿಹಾರಕ್ಕೆ ಸಂಭಂದಿಸಿದ ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡುತ್ತಿದ್ದೇನೆ ಎಂದು ಸಚಿವರು ತಿಳಿಸಿದರು.
ಪ್ರತಿ ಜಿಲ್ಲಾಧಿಕಾರಿ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ನಿರಂತರವಾಗಿ ತಾಲೂಕು ಮಟ್ಟದಲ್ಲಿ ಜನತಾದರ್ಶನ ಜರುಗಿಸಿ, ಜನರ ಅಹವಾಲು ಆಲಿಸಬೇಕೆಂದು ಮುಖ್ಯಮಂತ್ರಿಗಳು ಈಗಾಗಲೇ ನಿರ್ಧೆಶನ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಜಿಲ್ಲೆಯ ಇತರ ಸ್ಥಳಗಳಲ್ಲೂ ಜನತಾದರ್ಶನ ನಡೆಸಲು ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಶಾಸಕ ಎನ್.ಎಚ್.ಕೋನರಡ್ಡಿ ಅವರು ಮಾತನಾಡಿ, ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ತಾವು ಈಗಾಗಲೇ ಕ್ಷೇತ್ರದಲ್ಲಿ ಪ್ರತಿ ವಾರ ಜನರ ಸಮಸ್ಯೆಗಳನ್ನು ಆಲಿಸಲು ನವಲಗುಂದ ಮತ್ತು ಹುಬ್ಬಳ್ಳಿ, ಅಣ್ಣಿಗೇರಿ ಪಟ್ಟಣಗಳಲ್ಲಿ ಮಾಡಲಾಗಿದೆ ಎಂದು ಅವರು ಹೇಳಿದರು.
ಜನತಾದರ್ಶನವು ರಾಜ್ಯ ಸರಕಾರದ ಜನಮುಖಿ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಜನತಾದರ್ಶನದ ಸದುಪಯೋಗವಾಗಬೇಕು. ತೀರಾ ವೈಯಕ್ತಿಕ ಹಾಗೂ ಅಧಿಕಾರಿ, ಸಿಬ್ಬಂದಿಗಳನ್ನು ಒತ್ತಡಕ್ಕೆ, ಹೆದರಿಕೆಗೆ ಒಳಪಡಸುವ ತಂತ್ರಗಾರಿಕೆ ಮಾಡಬಾರದು. ಜನತಾದರ್ಶನ ಬರೀ ಅಹವಾಲು ಸಲ್ಲಿಕೆಗೆ ಮಾತ್ರ ಮೀಸಲಾಗದೇ ಜಿಲ್ಲೆಯ, ಮಹಾನಗರದ ಅಭಿವೃದ್ಧಿಗೆ ಪೂರಕ ಸಲಹೆ, ಮಾರ್ಗದರ್ಶನ ನೀಡಬೇಕು. ನಿಜವಾದ ಬಡವರ, ಅನ್ಯಾಯವಾದವರ ಅಳಲು ಆಲಿಸಿ, ಪರಿಹರಿಸಲು ಕ್ರಮವಹಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರದ ಆದೇಶದಂತೆ ಜಿಲ್ಲಾಮಟ್ಟದಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿ, ಅಗತ್ಯ ತುರ್ತು ಪರಿಹಾರ ಕ್ರಮ ಕೈಗೊಳ್ಳಲು ಅನುವಾಗುವಂತೆ ಜನತಾದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ.
ನಿನ್ನೆಯವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾರು 136 ಕ್ಕೂ ಹೆಚ್ಚು ಹಾಗೂ ಇವತ್ತು ಸಹ ಹಲವಾರು ಅಹವಾಲುಗಳು ಸಲ್ಲಿಕೆ ಆಗಿವೆ.
ಕ್ರಿಯಾಶೀಲರಾದ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಸದಾ ಜನಸಾಮಾನ್ಯರ ಮಧ್ಯದಲ್ಲಿ ಇರುವದರಿಂದ ಮತ್ತು ಸದಾ ಕಾಲ ಜಿಲ್ಲೆಯ ನಗರ, ಗ್ರಾಮಗಳಿಗೆ ಭೇಟಿ ನೀಡುತ್ತಿರುವದರಿಂದ ಜನರ ಸಮಸ್ಯೆಗಳನ್ನು ಸ್ಥಳದಲ್ಲಿ ಆಲಿಸಿ, ಪರಿಹಾರಕ್ಕೆ ಸೂಚಿಸುತ್ತಾರೆ.
ಇದರಿಂದಾಗಿ ಇಂದಿನ ಜನತಾ ದರ್ಶನಕ್ಕೆ ಪ್ರಮುಖ ಮತ್ತು ಕಾನೂನು, ಇತರೆ ಕಾರಣಗಳಿಂದ ಪರಿಹಾರವಾಗದೆ ಇರುವ ಸಮಸ್ಯೆಗಳು, ಜನತಾ ದರ್ಶನಕ್ಕೆ ಬಂದಿವೆ ಎಂದು ಅವರು ತಿಳಿಸಿದರು.
ಸಚಿವರು ಪ್ರತಿ ಅಹವಾಲನ್ನು ಸ್ವತಃ ಆಲಿಸಿ, ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಪರಿಹಾರ ಸೂಚಿಸಲಿದ್ದಾರೆ.
ಶಾಂತಿಯುತವಾಗಿ ಬಂದು, ತಮ್ಮ ಅಹವಾಲು ಸಲ್ಲಿಸಬೇಕು ಎಂದು ಅವರು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ಜಿಲ್ಲೆಯ ಸಚಿವರ, ಜನಪ್ರತಿನಿಧಿಗಳ ಸಹಕಾರದಲ್ಲಿ ಅಧಿಕಾರಿಗಳು ಜನಸ್ನೇಹಿ ಆಡಳಿತ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಅವರು ಸ್ವಾಗತಿಸಿದರು.
ವೇದಿಕೆಯಲ್ಲಿ ಕೃಷಿ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ, ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ, ಮಹಾನಗರ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಸಂತೋಷಕುಮಾರ ಬಿರಾದಾರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸಿಲ್ದಾರರು, ತಾಲೂಕು ಅಧಿಕಾರಿಗಳು ಇದ್ದರು.
ಜಿಲ್ಲೆಯ ವಿವಿಧೆಡೆಯಿಂದ ತಮ್ಮ ಅಹವಾಲುಗಳನ್ನು ಹೊತ್ತು ಸಾವಿರಾರು ಜನ ಜನತಾದರ್ಶನಕ್ಕೆ ಬಂದು, ಅಹವಾಲು ಸಲ್ಲಿಸಿದರು.
*ಫಲಾನುಭವಿಗಳಿಗೆ ಸೌಲಭ್ಯ* ವೇದಿಕೆಯಲ್ಲಿ ಸಚಿವರು, ಕಂದಾಯ ಇಲಾಖೆಯ ವಿವಿಧ ಸಾಮಾಜಿಕ ಯೋಜನೆಗಳಾದ ಪಿಂಚಣಿ, ಸೌಲಭ್ಯಗಳನ್ನು ಮತ್ತು ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರ ಅರ್ಹ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್, ವಿವಿಧ ಯೋಜನೆಗಳ ಸಹಾಯಧನದ ಚೆಕ್ ಗಳನ್ನು ಸಾಂಕೇತಿಕವಾಗಿ ಫಲಾನುಭವಿಗಳಿಗೆ ವಿತರಿಸಿದರು.
*******************