This is the title of the web page
This is the title of the web page

ವಿಪಕ್ಷ ನಾಯಕನ ಹುದ್ದೆಗೆ ಬಿಜೆಪಿ 66 ಶಾಸಕರಲ್ಲಿ ಒಬ್ಬರಿಗೂ ಯೋಗ್ಯತೆ ಇಲ್ಲವೇ? ಬಿಜೆಪಿಗೆ ಕಾಂಗ್ರೆಸ್‌ ಟ್ವೀಟ್

ವಿಪಕ್ಷ ನಾಯಕನ ಹುದ್ದೆಗೆ ಬಿಜೆಪಿ 66 ಶಾಸಕರಲ್ಲಿ ಒಬ್ಬರಿಗೂ ಯೋಗ್ಯತೆ ಇಲ್ಲವೇ? ಬಿಜೆಪಿಗೆ ಕಾಂಗ್ರೆಸ್‌ ಟ್ವೀಟ್

 

ಬೆಂಗಳೂರು, ಜು 15:ಈಗ ವಿಪಕ್ಷ ನಾಯಕನ ಆಯ್ಕೆಗೆ ಸತಾಯಿಸುತ್ತಿದ್ದಾರೆ. ಬಿಜೆಪಿ ಹೈಕಮಾಂಡಿಗೆ ಕರ್ನಾಟಕವನ್ನಷ್ಟೇ ಅಲ್ಲ, ಕರ್ನಾಟಕದ ಬಿಜೆಪಿಯನ್ನು ಕಂಡರೂ ತಾತ್ಸಾರವೇ?’ ಎಂದು ಪ್ರಶ್ನಿಸಿದೆ. ಕರ್ನಾಟಕದ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಂದು ಎರಡು ತಿಂಗಳುಗಳು ಉರುಳಿವೆ. ಹೀನಾಯ ಸೋಲು ಅನುಭವಿಸಿರುವ ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ವಿಫಲವಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಘಟಕವನ್ನು ಕಾಂಗ್ರೆಸ್‌ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ವಿಪಕ್ಷ ನಾಯಕನಿಲ್ಲದೇ ವಿಧಾನಸಭೆ ಕಲಾಪ ನಡೆದಿರುವುದು ಇದೇ ಮೊದಲ ಬಾರಿ ಎಂದು ಟೀಕಿಸಿದ್ದಾರೆ.

ಈ ವಿಚಾರವಾಗಿ ಶನಿವಾರ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್‌ ಘಟಕವು, ‘ಚುನಾವಣೆ ಮುಗಿದು, ಸರ್ಕಾರ ರಚನೆಯಾಗಿ 2 ತಿಂಗಳಾದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗದಿರುವುದಕ್ಕೆ ಕಾರಣಗಳೇನು ಬಿಜೆಪಿ?’ ಎಂದು ಪ್ರಶ್ನಿಸಿದರು. ರಾಜ್ಯ ಬಿಜೆಪಿಯ ಬಗ್ಗೆ ಹೈಕಮಾಂಡಿನ ತಿರಸ್ಕಾರವೇ? 66 ಶಾಸಕರಲ್ಲಿ ಒಬ್ಬರಿಗೂ ಯೋಗ್ಯತೆ ಇಲ್ಲವೇ? ಆಂತರಿಕ ಕಚ್ಚಾಟದಲ್ಲಿ ಯಾರೊಬ್ಬರನ್ನು ಆಯ್ಕೆ ಮಾಡಲಾಗದ ತೊಳಲಾಟವೇ? ಆ ಹುದ್ದೆಯನ್ನೂ ಮಾರಾಟಕ್ಕೆ ಇಡಲಾಗಿದೆಯೇ, ಇನ್ನೂ ನಿಗದಿಪಡಿಸಿದ ಮೊತ್ತಕ್ಕೆ ಬಿಡ್ಡಿಂಗ್ ಆಗಿಲ್ಲವೇ?’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

‘ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಬಂದು 2 ತಿಂಗಳುಗಳು ಕಳೆದಿವೆ. ಅಧಿವೇಶನವೂ ಪ್ರಾರಂಭ ಆಗಿ ಹೋಗಿದೆ. ಆದರೆ ಬಿಜೆಪಿಯ ವಿರೋಧ ಪಕ್ಷದ ನಾಯಕನೆಲ್ಲಿ?’ ಎಂದು ಪ್ರಶ್ನಿಸಿದೆ.

‘ನಾವಿಕನಿಲ್ಲದ ನೌಕೆ, ನಾಯಕನಿಲ್ಲದ ಬಿಜೆಪಿ ಎರಡೂ ಮುಳುಗುವುದು ನಿಶ್ಚಿತ. ಹಿಂದೆ ಬಿಎಸ್‌ ಯಡಿಯೂರಪ್ಪ ಅವರು ಸಂಪುಟ ರಚನೆಗೆ ತಿಂಗಳುಗಟ್ಟಲೆ ಹೈಕಮಾಂಡ್ ಬಾಗಿಲು ಕಾದಿದ್ದರು. ನಂತರ ಬಸವರಾಜ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆಗೆ 15ಕ್ಕೂ ಹೆಚ್ಚು ಬಾರಿ ದೆಹಲಿ ದಂಡಯಾತ್ರೆ ಮಾಡಿದ್ದರು, ಆದರೂ ಸಂಪುಟ ವಿಸ್ತರಣೆಯಾಗಲಿಲ್ಲ’ ಎಂದು ಕಾಂಗ್ರೆಸ್‌ ಟೀಕಿಸಿದೆ. ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ ಎಂದಿರುವ.

ವಿಪಕ್ಷ ನಾಯಕ ಬೇಕಾಗಿದ್ದಾರೆ. ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರಬಾರದು, ಸುಳ್ಳು ಹೇಳಬಾರದು. ಘನತೆಯ ವ್ಯಕ್ತಿತ್ವದವರು, ತೂಕದ ಮಾತಿನವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ’ ಎಂದೂ ಕಾಂಗ್ರೆಸ್‌ ಕುಟುಕಿದೆ.