ಬೆಳಗಾವಿ: ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಮುಂದಿನ 5 ವರ್ಷಗಳಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗಾವಕಾಶ ನೀಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.
ನಗರದ ಸಿಪಿಎಡ್ ಮೈದಾಅನದಲ್ಲಿ ನಡೆದ `ಯುವಕ್ರಾಂತಿ’ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, 5 ವರ್ಷಗಳಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗ ನೀಡಲಿದೆ. ಜೊತೆಗೆ ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ 2.5 ಲಕ್ಷ ಉದ್ಯೋಗವನ್ನು ರಾಜ್ಯದ ಯುವಜನರಿಗೆ ಸಿಗುವಂತೆ ಮಾಡಲಿದೆ ಎಂದು ಘೋಷಣೆ ಮಾಡಿದರು.
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತ, 200 ಯೂನಿಟ್ ವಿದ್ಯುತ್ ಉಚಿತ, ಕುಟುಂಬದ ಓರ್ವ ಮಹಿಳೆಗೆ 2 ಸಾವಿರ ರೂ. ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
ಕೆಲ ತಿಂಗಳ ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತ್ ಜೋಡೋ ಯಾತ್ರೆ ನಡೆಸಲಾಯಿತು. ಅದಕ್ಕೆ ರಾಜ್ಯದಿಂದಲೂ ಜನರು ಅಪಾರ ಬೆಂಬಲ ಕೊಟ್ಟಿದ್ದರು. ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ. ನಾವು ರಾಜ್ಯದಲ್ಲಿ ಭಾರತ್ ಜೋಡೊ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಯುವಕರು ನಮಗೆ ಕೆಲ ಸಂದೇಶ ಕೊಟ್ಟರು. ಯಾವುದೇ ಪದವೀಧರರಿಗೂ ಕರ್ನಾಟಕ ಸರ್ಕಾರ ಉದ್ಯೋಗ ಕೊಡುತ್ತಿಲ್ಲ, ಯಾವುದೇ ಕೆಲಸ ಆಗಬೇಕು ಅಂದರೂ 40 ಪರ್ಸೆಂಟ್ ಕಮಿಷನ್ ಕೊಡಬೇಕಾಗಿದೆ. ಇಡೀ ದೇಶದಲ್ಲೇ ಕರ್ನಾಟಕ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ ಎಂಬ ಸಂದೇಶಗಳನ್ನ ನೀಡಿದರು. ಯುವಕರಿಗೆ ನಿರುದ್ಯೋಗದಿಂದ ಸಮಸ್ಯೆಗಳಾಗುತ್ತಿವೆ. ಸಾಕಷ್ಟು ಮುಜುಗರ ಎದುರಿಸುತ್ತಿದ್ದಾರೆ. ಇದೆಲ್ಲವನ್ನು ಮನಗಂಡು ನಮ್ಮ ಸರ್ಕಾರ `ಯುವನಿಧಿ’ಯನ್ನ ಘೋಷಣೆ ಮಾಡಿದೆ ಎಂದು ಹೇಳಿದರು.
ದೇಶದಲ್ಲಿ ಎಲ್ಲ ಕೈಗಾರಿಕೆಗಳನ್ನ ಅದಾನಿ ಕೈಗೆ ಕೊಡುತ್ತಿದ್ದಾರೆ. ರಸ್ತೆ ಏರ್ಪೋರ್ಟ್ಗಳನ್ನ ಅವರಿಗೇ ಬಿಟ್ಟುಕೊಡಲಾಗುತ್ತಿದೆ. ಬಿಜೆಪಿ ಸರ್ಕಾರದಿಂದ ತಮ್ಮ ಗೆಳೆಯರಿಗೆ ಮಾತ್ರ ಲಾಭವಾಗುತ್ತಿದೆ. ಇದರಿಂದಲೇ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಇದೆಲ್ಲವನ್ನೂ ಕಾಂಗ್ರೆಸ್ ಯುವಕರಿಗೆ ತಿಳಿಸುವ ಕೆಲಸ ಮಾಡಿದೆ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪ್ರಧಾನಿ ಮೋದಿಯವರು ನಾನು ರಿಮೋಟ್ ಕಂಟ್ರೋಲ್ನಲ್ಲಿ ಇದ್ದೇನೆ ಎಂದು ಹೇಳುತ್ತಾರೆ. ಆದರೆ, ಬಿಜೆಪಿ ಅಧ್ಯಕ್ಷ ನಡ್ಡಾ ಯಾರ ಕಂಟ್ರೋಲ್ನಲ್ಲಿ ಇದ್ದಾರೆ ಎಂದು ಪ್ರಶ್ನಿಸಿದರು.
ಖರ್ಗೆ ರಿಮೋಟ್ ಕಂಟ್ರೋಲ್ನಲ್ಲಿ ಇದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ತಿರುಗೇಟು ನೀಡಿ, ಜೋಡೋ ಯಾತ್ರೆ ವೇಳೆ ಜನ ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು. ದೇಶದಲ್ಲಿ ಜಾತಿ ಪದ್ಧತಿ, ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಿದೆ. ಇದನ್ನು ಹೇಳಿದ್ದಕ್ಕೆ ರಾಹುಲ್ ಗಾಂಧಿಗೆ ಕಿರುಕುಳ ಕೊಡುತ್ತಿದ್ದಾರೆ. ಜೈಲಿಗೆ ಹಾಕಿದರೂ ನಾವು ಸತ್ಯವನ್ನ ಹೇಳುವುದನ್ನ ಬಿಡುವುದಿಲ್ಲ. ಖಾಲಿ ಇರುವ ಉದ್ಯೋಗವನ್ನು ಬಿಜೆಪಿ ಸರ್ಕಾರ ಭರ್ತಿ ಮಾಡುತ್ತಿಲ್ಲ. ನಾವು ಅಧಿಕಾರಕ್ಕೆ ಬಂದರೆ ಒಂದೂವರೆ ವರ್ಷದಲ್ಲಿ ಒಂದೂವರೆ ಲಕ್ಷ ಹುದ್ದೆ ಭರ್ತಿ ಮಾಡುತ್ತೇವೆ ಎಂದು ಹೇಳಿದರು.
ಈಗ ಚುನಾವಣೆ ಬರುತ್ತಿದೆ. ಕರ್ನಾಟಕ ರಾಜ್ಯಕ್ಕೆ ಬಹಳ ಮಹತ್ವದ ಚುನಾವಣೆ. ಇಡೀ ದೇಶಕ್ಕೂ ಒಂದು ಸಂದೇಶ ಕೊಡುವ ಚುನಾವಣೆ. ಒಗಟ್ಟಾಗಿ ಈ ಚುನಾವಣೆಯನ್ನ ನಾವೆಲ್ಲರೂ ಎದುರಿಸಬೇಕಾಗಿದೆ. ಎಐಸಿಸಿ ಅಧ್ಯಕ್ಷನಾದ ಮೇಲೆ ಮೊದಲ ಬಾರಿಗೆ ನಾನು ಇಲ್ಲಿ ಕಾಲಿಟ್ಟಿದ್ದೇನೆ. ಬೆಳಗಾವಿ ಕಾಂಗ್ರೆಸ್ಗೆ ಒಂದು ಪವಿತ್ರವಾದ ಭೂಮಿ, ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷರಾಗಿ ಮಹಾತ್ಮ ಗಾಂಧೀಜಿ ಬೆಳಗಾವಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾಗಿದ್ದರು. ಇಂದು ಅದೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷನ್ನಾಗಿ ನನ್ನನ್ನು ಕುರಿಸಿದ್ದೀರಿ ಎಂದರು.
ಪ್ರಧಾನಿ ಮೋದಿಗೆ ಪ್ರಶ್ನೆ ಮಾಡಿದ ಖರ್ಗೆ: ಒಂದು ಕಾಲದಲ್ಲಿ ಬೆಳಗಾವಿ ಕಾಂಗ್ರೆಸ್ನ ಶಕ್ತಿಶಾಲಿ ಜಿಲ್ಲೆಯಾಗಿತ್ತು. ಹದಿನೆಂಟು ಸೀಟ್ನಲ್ಲಿ 15-16 ಸೀಟ್ ಗೆಲ್ಲುತ್ತೇವೆ. ಇಂದು ಆ ಪರಿಸ್ಥಿತಿ ಇದೆ. ಖಂಡಿತವಾಗಿ 18 ಸ್ಥಾನವನ್ನ ಬೆಳಗಾವಿಯಲ್ಲಿ ಗೆಲ್ಲುತ್ತೇವೆ. ಇಲ್ಲಿನ ಸರ್ಕಾರ ನಲವತ್ತು ಪರ್ಸಂಟ್ ಸರ್ಕಾರ. ಯಾವ ಕಾಲದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಭ್ರಷ್ಟಾಚಾರ ಇರಲಿಲ್ಲ. ಗುತ್ತಿಗೆದಾರರು ಪರ್ಸಂಟೇಜ್ ಕೊಡುವ ಕುರಿತು ಮೋದಿಯವರಿಗೆ ದೂರು ಕೊಟ್ಟಿದ್ದಾರೆ. ನೀವು ಯಾಕೆ ಅದರ ವಿರುದ್ಧ ಕೇಸ್ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಜಮ್ಮು ಕಾಶ್ಮೀರದಲ್ಲಿ 40 ದಿನದ ಹಿಂದೆ ರಾಹುಲ್ ಗಾಂಧಿ ಹೇಳಿದ ಮಾತನ್ನ, ನಿಮಗೆ ಯಾವ ಹೆಣ್ಣು ಮಗಳು ಹೇಳಿದಲು ಅಂತಾ ಸಾಕ್ಷಿ ಕೊಡಿ ಎಂದು ಅವರ ಮನೆಗೆ ಬಂದು ಕೇಳುತ್ತಿದ್ದಾರೆ. ಕರ್ನಾಟಕದಲ್ಲಿ ನಲವತ್ತು ಪರ್ಸಂಟ್ ಸಾಕ್ಷಿ ಕೊಟ್ಟರೂ ಏನು ಮಾಡಿದಿರಿ ಎಂದು ಹೇಳಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಪ್ರವಾಹ ಬಂದಾಗ ಬರಲಿಲ್ಲ, ಕೊರೊನಾ ಬಂದಾಗ ಆಮ್ಲಜನಕ ಸಿಗದೆ ರಾಜ್ಯದಲ್ಲಿ ನೂರಾರು ಜನ ಸತ್ತಾಗ, ಚಿಕಿತ್ಸೆ ಸಿಗದೆ ಲಕ್ಷಾಂತರ ಜನ ಸತ್ತಾಗ ಕರ್ನಾಟಕಕ್ಕೆ ಬರಲಿಲ್ಲ. ಈಗ ಚುನಾವಣೆ ಬರುತ್ತಿರುವುದರಿಂದ ವೋಟ್ ಗಾಗಿ ಮೇಲಿಂದ ಮೇಲೆ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು 9 ವರ್ಷವಾಗುತ್ತಾ ಬಂದಿದೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದು 4 ವರ್ಷ ತುಂಬುತ್ತಾ ಬಂದಿದೆ. ರಾಜ್ಯ ಬಿಜೆಪಿ ನಾಯಕರು ತಮ್ಮದು ಡಬ್ಬಲ್ ಇಂಜಿನ್ ಸರ್ಕಾರ ಎಂದು ಬಹಳಾ ಬಡಾಯಿ ಕೊಚ್ಚಿಕೊಂಡರು. ಕಳೆದ 9 ವರ್ಷದಲ್ಲಿ ದೇಶದ ಯುವ ಜನರಿಗೆ ನೀವು ಏನು ಮಾಡಿದ್ದೀರಿ? ಎಂದು ಕೇಳಲು ಬಯಸುತ್ತೇನೆ ಎಂದು ಪ್ರಶ್ನಿಸಿದರು.
ಇಂದು ಇಲ್ಲಿ ಸೇರಿರುವ ಯುವ ಜನರು ಕರ್ನಾಟಕದಲ್ಲಿರುವ ಯುವಜನ ವಿರೋಧಿ, ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಮುಂದಿನ 5 ವರ್ಷಗಳ ಕಾಲ ರಾಜ್ಯದ ಭವಿಷ್ಯವನ್ನು ರೂಪಿಸುವ ಕಾಂಗ್ರೆಸ್ ಸರ್ಕಾರವನ್ನು ತರುತ್ತೇವೆ ಎಂದು ಶಪಥ ಮಾಡಬೇಕು. ರಾಜೀವ್ ಗಾಂಧಿ ಅವರು 18 ವರ್ಷ ತುಂಬಿದ ಎಲ್ಲ ಯುವಕ, ಯುವತಿಯರಿಗೆ ಮತದಾನದ ಹಕ್ಕು ನೀಡಿದ್ದರು, ಇದರಿಂದ ದೇಶದ ಯುವ ಜನರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗಿದೆ. ಇದಕ್ಕಾಗಿ ನಾವು ಅವರನ್ನು ಈ ಸಂದರ್ಭದಲ್ಲಿ ನೆನೆಯಲೇಬೇಕು. ರಾಜೀವ್ ಗಾಂಧಿ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದರಿಂದ ದೇಶದ ಯುವಜನರಿಗೆ ಉದ್ಯೋಗ ಸಿಗಲು ಸಾಧ್ಯವಾಯಿತು ಎಂದು ತಿಳಿಸಿದರು.
ಇಡೀ ರಾಜ್ಯ ಸರ್ಕಾರವೇ ಭ್ರಷ್ಟವಾಗಿದೆ. ಇಲ್ಲಿನ ಸರ್ಕಾರಕ್ಕೆ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಮೋದಿ ಅವರನ್ನು ಪದೇ ಪದೇ ಕರೆದುಕೊಂಡು ಬಂದು ಚುನಾವಣೆ ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ, ಆದರೆ ಮತ್ತೆ ಮತ್ತೆ ನಾಡಿನ ಜನರನ್ನು ದಡ್ಡರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮೋದಿಯವರಿಗೆ ತಿಳಿಸಲು ಬಯಸುತ್ತೇನೆ ಎಂದು ಹೇಳಿದರು.
ಪಾಕಿಸ್ತಾನ, ಚೀನಾ, ಹಿಂದುತ್ವ ಎಂದು ಹೇಳಿ ಜನರ ಮತ ಪಡೆದು ಅಧಿಕಾರಕ್ಕೆ ಬಂದ ನಂತರ ಮೋದಿ ಅವರು ಸಂಪೂರ್ಣವಾಗಿ ಯುವ ಜನರನ್ನು ಮರೆತಿದ್ದಾರೆ. 2014ರಲ್ಲಿ ಈ ದೇಶದ ಯುವ ಜನರಿಗೆ ಪ್ರತೀ ವರ್ಷ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದು ಅವರು ಹೇಳಿದ್ದರು, ಈಗ 9 ವರ್ಷದಲ್ಲಿ 18 ಉದ್ಯೋಗ ನೀಡಬೇಕಿತ್ತು ಆದರೆ ಇದಕ್ಕೂ ಹೆಚ್ಚಿನ ಸಂಖ್ಯೆಯ ಉದ್ಯೋಗಗಳು ನಷ್ಟವಾಗಿದೆ. ಕೇಂದ್ರ ಸರ್ಕಾರದ ತಲೆಬುಡವಿಲ್ಲದ ಆರ್ಥಿಕ ನೀತಿಗಳಿಂದಾಗಿ ಲಕ್ಷಾಂತರ ಎಂ,ಎಸ್,ಎಂ,ಇ ಗಳು ಮುಚ್ಚಿಹೋದವು. ಇದರಿಂದ ಇಲ್ಲಿ ಉದ್ಯೋಗಗಳು ಸಿಗುವುದು ಕಷ್ಟವಾಯಿತು, ದೇಶದ 12,89,000 ಯುವ ಜನರು ಹೊರದೇಶದಲ್ಲಿ ಉದ್ಯೋಗ ಹುಡುಕಿಕೊಂಡು ಹೋಗಿದ್ದಾರೆ, ಈ ರೀತಿ ಪ್ರತಿಭಾ ಪಲಾಯನಕ್ಕೆ ನಿಮ್ಮ ಬಳಿ ಉತ್ತರವಿದೆಯಾ ಮೋದಿಜೀ? ಎಂದು ಟೀಕಿಸಿದರು.
ಮೋದಿ ಅವರು ರಾಜ್ಯಕ್ಕೆ ಬಂದಾಗ ನಿರುದ್ಯೋಗ, ಭ್ರಷ್ಟಾಚಾರ, ರೈತರು, ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ, ಕೇವಲ ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪ ಮಾಡಿ ಜನರ ದಾರಿ ತಪ್ಪಿಸಲು ಹೊರಟಿದ್ದೀರಿ, ಇದರಿಂದ ನಿಮಗೆ ಯಾವ ಪ್ರಯೋಜನವೂ ಆಗಲ್ಲ ಮೋದಿಜೀ. ಇಂದು ಹಣದ ಮೂಲಕಕ ಚುನಾವಣೆ ಗೆಲ್ಲಬೇಕು ಎಂದು ಬಿಜೆಪಿಯವರು ಹೊರಟಿದ್ದಾರೆ, ಇದೂ ಕೂಡ ಅವರಿಂದ ಸಾಧ್ಯವಾಗಲ್ಲ ಕಾರಣ ಇಲ್ಲಿನ ಸರ್ಕಾರ “40% ಕಮಿಷನ್ ಸರ್ಕಾರ” ಎಂದು ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಜನಜನಿತವಾಗಿದೆ. ಇಲ್ಲಿ ನಡೆಯುವ ಎಲ್ಲಾ ನೇಮಕಾತಿಗಳಲ್ಲಿ ಲಂಚ ಕೊಡಬೇಕು, ನಾವು ಅಧಿಕಾರದಲ್ಲಿದ್ದಾಗ 1 ಲಕ್ಷದ 62 ಸಾವಿರ ಸರ್ಕಾರಿ ಉದ್ಯೋಗಗಳನ್ನು ಮತ್ತು ಖಾಸಗಿ ಕ್ಷೇತ್ರದಲ್ಲಿ 11 ರಿಂದ 12 ಲಕ್ಷ ಉದ್ಯೋಗಗಳನ್ನು ಯುವಜನರಿಗೆ ನೀಡಿದ್ದೆವು. ಬಿಜೆಪಿ ಬಂದ ಮೇಲೆ ಉದ್ಯೋಗ ಸೃಷ್ಟಿ ನಿಂತು ಹೋಗಿದೆ. ಮತ್ತೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಆಗಬೇಕಾದರೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದರು.
ಶಿಕ್ಷಣ ಕ್ಷೇತ್ರಕ್ಕೆ ಅನುದಾನ ನೀಡದೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡದೆ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡುತ್ತಿದ್ದಾರೆ. ಎಸ್,ಎಸ್,ಎಲ್,ಸಿ ಪೂರ್ವ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನಯಾಪೈಸೆ ವಿದ್ಯಾರ್ಥಿ ವೇತನ ನೀಡಿಲ್ಲ. ಹೊಸ ಶಿಕ್ಷಣ ನೀತಿಯ ಮೂಲಕ ಅವೈಜ್ಞಾನಿಕ, ವೈಚಾರಿಕವಲ್ಲದ ಶಿಕ್ಷಣ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಅಪಾಯದಲ್ಲಿದೆ. ಯುವ ಜನರೇ ದೇಶದ ಮತ್ತು ರಾಜ್ಯದ ಭವಿಷ್ಯ. ನಾಡಿದ ಆರ್ಥಿಕತೆ, ನಿಮ್ಮ ಭವಿಷ್ಯವನ್ನು ಉಳಿಸಿಕೊಳ್ಳಲು ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ತೀರ್ಮಾನಕ್ಕೆ ಬರಬೇಕು. ನೀವು ಮಾತ್ರ ಅಲ್ಲ, ಎಲ್ಲಾ ಯುವಜನರಲ್ಲೂ ಈ ಬಗ್ಗೆ ಜಾಗೃತಿಯನ್ನು ಮೂಡಿಸುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಕಾರಣಿಕರ್ತರಾಗಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಭ್ರಷ್ಟಾಚಾರ ಮುಕ್ತ ಕರ್ನಾಟಕ ಮಾಡಬೇಕೆಂಬ ಉದ್ದೇಶದಿಂದ ರಾಹುಲ್ ಗಾಂಧಿ ಅವರು ಬೆಳಗಾವಿಯಲ್ಲಿ ಯುವ ಕ್ರಾಂತಿ ರ್ಯಾಲಿಗೆ ಚಾಲನೆ ನೀಡಿದ್ದಾರೆ. ಭವ್ಯ ಭಾರತ ಕನಸು ನನಸಾಗಬೇಕಾದರೆ ಯುವಕರ ಬಲಿಷ್ಠವಾಗಬೇಕಿದೆ ಎಂದು ಹೇಳಿದರು.
ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಯುವಕರಿಗೆ ಮತದಾನ ಹಕ್ಕು ನೀಡಿದೆ. ಇದರಿಂದ 18 ವರ್ಷದ ಯುವಕರು ಮತದಾನ ಮಾಡಲು ಅನುಕೂಲವಾಗಿದೆ. ಆದರೆ, ಅದೇ ಯುವಕರಿಗೆ ಮೋದಿ ಆಡಳಿತದಿಂದ ಕಂಟಕ ಎದುರಾಗಿದೆ. ಭಾರತ ಕಟ್ಟಬೇಕಾಗಿರುವ ಯುವಕರು ಉದ್ಯೋಗ ಇಲ್ಲದೇ ಮನೆಯಲ್ಲಿ ಕುಳಿತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿ ಕಾರಿದರು.
140 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಖಾಸಗಿ ಕ್ಷೇತ್ರದಲ್ಲಿ ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡುವ ಪಕ್ಷವನ್ನು ಅಧಿಕಾರಕ್ಕೆ ತನ್ನಿ, ಭಾರತದ ಭವಿಷ್ಯಕ್ಕಾಗಿ ಯುವಕರಿಗೆ ಉದ್ಯೋಗ ಸಿಗಬೇಕು. ಅದಕ್ಕಾಗಿ ರಾಹುಲ್ ಗಾಂಧಿಯವರು ಹೊಸ ಯೋಜನೆ ಘೋಷಣೆ ಮಾಡುವ ಮೂಲಕ ಯುವಕರಿಗೆ ಉತ್ಸಾಹ ತುಂಬುತ್ತಿದ್ದಾರೆ. 40 % ಕಮಿಷನ್ ದಿಂದ ಸರ್ಕಾರ ಮೇಲಿನ ಭರವಸೆಯನ್ನು ರಾಜ್ಯದ ಜನತೆ ಕಳೆದುಕೊಂಡಿದ್ದಾರೆ, ಆದರೂ ಬಿಜೆಪಿಗರು, ಬಿಜಿಪಿಯೇ ಭರವಸೆ ಎಂದು ಪ್ರಚಾರ ಮಾಡುತ್ತಿದ್ದಾರೆ, ಇನ್ಮೊಂದೆ ಇವರ ಆಟ ನಡೆಯುವುದಿಲ್ಲ ಎಂದು ಚಾಟಿ ಬೀಸಿದರು.
ರಾಜ್ಯದ 140 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ, ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಮಲ ಕೆಸರಿನಲ್ಲಿ ಇದ್ದರೆ ಚೆಂದ… ತೆನೆ ಹೋಲದಲ್ಲಿ ಇದ್ದರೆ ಚೆಂದ.. ಕೈ ಅಧಿಕಾರದಲ್ಲಿ ಇದ್ದರೆ ಚೆಂದ.. ಎನ್ನುವ ಮೂಲಕ ಕಮಲ ಪಡೆಗಳಿಗೆ ಡಿಕೆಶಿ ಕುಟುಕಿದರು.
ಕಾಂಗ್ರೆಸ್ನಿಂದ 4ನೇ ಗ್ಯಾರಂಟಿ ಯೋಜನೆ ಘೋಷಣೆ: ಕಾಂಗ್ರೆಸ್ ಪಕ್ಷ ಯುವ ಸಭಲೀಕರಣಕ್ಕೆ ಮಹತ್ವದ ಯುವನಿಧಿ ಯೋಜನೆಯನ್ನು ಘೋಷಿಸಿದ್ದು, 2 ವರ್ಷಗಳವರೆಗೆ ಪ್ರತಿ ತಿಂಗಳು ನಿರುದ್ಯೋಗಿ ಪದವೀಧರರಿಗೆ 3000 ರೂ. ಆರ್ಥಿಕ ನೆರವು ಘೋಷಿಸಿದೆ. ಅಲ್ಲದೆ ನಿರುದ್ಯೋಗಿ ಡಿಪ್ಲೊಮಾ ಪಧವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ ಘೋಷಿಸಿದೆ.
“ಯುವಕ್ರಾಂತಿ” ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ನಾಲ್ಕನೇ ಗ್ಯಾರಂಟಿ ಕಾರ್ಡ್ ಅನ್ನು ಬಿಡುಗಡೆ ಮಾಡಿದರು. ಈಗಾಗಲೇ ಕಾಂಗ್ರೆಸ್ ಮೂರು ಗ್ಯಾರಂಟಿಯನ್ನು ಘೋಷಣೆ ಮಾಡಿದೆ. ಪ್ರತಿ ತಿಂಗಳು ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತ, 200 ಯೂನಿಟ್ ವಿದ್ಯುತ್ ಉಚಿತ, ಕುಟುಂಬದ ಓರ್ವ ಮಹಿಳೆಗೆ 2 ಸಾವಿರ ರೂ. ನೀಡಲಾಗುವುದು ಎಂದು ಕಾಂಗ್ರೆಸ್ ಈಗಾಗಲೇ ಘೋಷಣೆ ಮಾಡಿದೆ. ಇಂದು 4ನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆ.
ಈ ಯುವಕ್ರಾಂತಿ ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್ ಖಾನ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ, ಕಾಂಗ್ರೆಸ್ ನಾಯಕ ಕೆ.ಎಚ್.ಮುನಿಯಪ್ಪ, ರಾಷ್ಟ್ರೀಯ ಯುತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ರಾಜ್ಯ ಯುತ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್, ವಿಧಾನ ಪರಿಷತ್ ಸದಸ್ಯರಾದ ನಾರಾಯಣ ಸ್ವಾಮಿ,ಮಾಜಿ ಸಚಿವರಾದ ಆರ್. ವಿ. ದೇಶಪಾಂಡೆ, ರಾಮಲಿಂಗಾ ರೆಟ್ಟಿ, ಎಚ್ ಆಂಜನೇಯ, ಮಾಜಿ ಸಚಿವ ವಿನಯ ಕುಲಕರ್ಣಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಗಣೇಶ ಹುಕ್ಕೇರಿ, ಪ್ರಕಾಶ ಹುಕ್ಕೇರಿ, ಮಹಾಂತೇಶ ಕೌಜಲಗಿ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕರಾದ ರಾಜು ಕಾಗೆ, ಅಶೋಕ ಪಟ್ಟಣ, ಯುವ ನಾಯಕ ರಾಹುಲ್ ಜಾಕಿಹೊಳಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಸೇರಿದಂತೆ, , ಆರು ಜಿಲ್ಲೆಯ ಕೈ ನಾಯಕರು ಹಾಗೂ ಸಾವಿರಾರು ಕೈ ಕಾರ್ಯಕರ್ತರು ಭಾಗಿಯಾಗದ್ದರು.