ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಹೇಮಂತ ನಿಂಬಾಳ್ಕರ್ ಅವರನ್ನು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಭೇಟಿ ಮಾಡಿ ಶುಭ ಕೋರಿದರು.
ಪತ್ರಕರ್ತರ ಮಾಸಾಶನ ಸಮಿತಿ ಸಭೆ ಮತ್ತು ಅಕ್ರೆಡಿಟೇಷನ್ ಕಮಿಟಿ ಸಭೆ ನಡೆದಿಲ್ಲ. ಜತೆಗೆ ಪತ್ರಕರ್ತರ ಹಲವು ಸಮಸ್ಯೆಗಳು ಹಾಗೇ ಉಳಿದಿವೆ ಎಂಬುದನ್ನು ತಗಡೂರು ಅವರು ಆಯುಕ್ತರ ಗಮನಕ್ಕೆ ತಂದರು. ಆದಷ್ಟು ಬೇಗ ಪತ್ರಕರ್ತರ ಮಾಸಾಶನ ಹಾಗೂ ಮಾಧ್ಯಮ ಮಾನ್ಯತಾ ಸಮಿತಿ ಸಭೆ ನಡೆಸುವುದಾಗಿ ಆಯುಕ್ತರು ಭರವಸೆ ನೀಡಿದರು.
ಪತ್ರಕರ್ತರ ಯಾವುದೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತಂದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸದಾಕಾಲ ಪತ್ರಕರ್ತರ ಬೆನ್ನೆಲುಬಾಗಿರುತ್ತೇನೆ. ಸರಕಾರ ಮತ್ತು ಪತ್ರಕರ್ತರ ನಡುವೆ ಸೇತುವೆಯಾಗಿ ವಾರ್ತಾ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದರು.
ಹಿರಿಯ ಪತ್ರಕರ್ತರಾದ ನಾಗಣ್ಣ, ಶಿವಕುಮಾರ್, ಯಾದಗಿರಿ ಎಕ್ಸ್‌ಪ್ರೆಸ್ ಪತ್ರಿಕೆಯ ಸಂಪಾದಕರು & ಯಾದಗಿರಿ ಜಿಲ್ಲಾ ಪತ್ರಕರ್ತರ ಸಂಘದ ಖಜಾಂಚಿ ಕುಮಾರ ಸ್ವಾಮಿ ಸೇರಿದಂತೆ ಇತರರು ಇದ್ದರು.