ಬೆಂಗಳೂರು: ಕಳೆದ ಬಿಜೆಪಿ ಸರ್ಕಾರದ ಆಡಳತ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಪ್ರಧಾನಿ ಸಿಎಂಗೆ ಪತ್ರ ಬರೆದಿದ್ದ ಸಚಿವ ಪ್ರಿಯಾಂಕ್ ಖರ್ಗೆ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಸಂಘದಿಂದ ಅನುದಾನ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿದ್ದರಾಮಯ್ಯನವರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಸುಮಾರು 5 ಸಾವಿರ ಕೋಟಿ ರೂಪಾಯಿ ಅನುದಾನದಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಇಲಾಖಾ ತನಿಖೆ ನಡೆಸಲು ಆದೇಶಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಅದರಂತೆ ಇದೀಗ ಸಿದ್ದರಾಮಯ್ಯ ಅವರು ಈ ಕೂಡಲೇ ಈ ವಿಷಯದ ಕುರಿತು ನಿರ್ದಾಕ್ಷಿಣ್ಯವಾಗಿ ಇಲಾಖಾ ತನಿಖೆ ನಡೆಸಲು ಆದೇಶ ಹೊರಡಿಸಿದ್ದಾರೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಎಲ್ಲೆಲ್ಲಿ ನಿಯಮಬಾಹಿರವಾಗಿ ಅನುದಾನಗಳನ್ನು ವಿನಿಯೋಗಿಸಲಾಗಿದೆ, ಯಾವ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂಬುದರ ಕುರಿತು ಗಂಭೀರವಾಗಿ ಪರಿಗಣಿಸಿ 15 ದಿನಗಳ ಒಳಗೆ ವಿವರಗಳೊಂದಿಗೆ ವರದಿಯನ್ನು ಸಲ್ಲಿಸುವಂತೆ ಸಿಎಂ ಆದೇಶ ಹೊರಡಿಸಿದ್ದಾರೆ.