This is the title of the web page
This is the title of the web page

ಎಲ್ಲ ಗ್ಯಾರಂಟಿಗಳಿಗೆ ಸಿಎಂ ಸಿದ್ದರಾಮಯ್ಯ ಅಸ್ತು

ಎಲ್ಲ ಗ್ಯಾರಂಟಿಗಳಿಗೆ ಸಿಎಂ ಸಿದ್ದರಾಮಯ್ಯ ಅಸ್ತು

 

ಬೆಂಗಳೂರು, ಜೂನ್‌ 2: ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ನೀಡಿದ್ದ 5 ಗ್ಯಾರಂಟಿಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸ್ತು ಎಂದಿದ್ದು, ಎಲ್ಲ ಗ್ಯಾರಂಟಿಗಳಿಗೆ ಷರತ್ತುಬದ್ಧ ಅನುಮತಿಯನ್ನು ನೀಡಿದ್ದಾರೆ.

ಗ್ಯಾರಂಟಿ ಸಂಬಂಧ ವಿಧಾನಸೌಧದಲ್ಲಿ ಕ್ಯಾಬಿನೆಟ್‌ ಸಭೆ ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಾವು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ, ಅದಕ್ಕಿಂತ ಮುಂಚಿತವಾಗಿ ನೀಡಿದ್ದ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವು. ಇದಕ್ಕೆ ನಮ್ಮ ಸಹಿ ಮಾಡಿ ಗ್ಯಾರಂಟಿ ಕಾರ್ಡ್ ನೀಡಿದ್ದೇವು. ನಾವು ಈ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂಬ ಭರವಸೆ ನೀಡಿದ್ದೇವು. ಅದರಂತೆ ಎಲ್ಲ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನಾ ಜನತೆಗೆ ನೀಡಲಾಗಿದ್ದ ಎಲ್ಲಾ ಗ್ಯಾರಂಟಿ ಭರವಸೆಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸಚಿವ ಸಂಪುಟ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಮೊದಲ ಗ್ಯಾರಂಟಿಯಾಗಿ ಗೃಹ ಜ್ಯೋತಿ ಯೋಜನೆಯನ್ನು ಜುಲೈ 1 ರಿಂದ ಜಾರಿ ಮಾಡಲಾಗುವುದು ಎಂದರು. 12 ತಿಂಗಳ ಸರಾಸರಿ ಆಧರಿಸಿ, ಅದಕ್ಕೆ ಶೇಕಡಾ 10 ರಷ್ಟು ಸೇರಿಸಿ, ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗುವುದು,

ಈ ಹಿಂದಿನ ಹಳೇ ವಿದ್ಯುತ್ ಬಾಕಿಯನ್ನು ಗ್ರಾಹಕರೇ ಪಾವತಿಸಬೇಕು.ಜುಲೈ ತಿಂಗಳ ವಿದ್ಯುತ್ ಬಳಕೆಗೆ ಆಗಸ್ಟ್ ನಿಂದ ಅನ್ವಯವಾಗಲಿದೆ. ಬಾಡಿಗೆದಾರರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದರು. ಯಾವುದೇ ಜಾತಿ, ಧರ್ಮಗಳ ತಾರತಮ್ಯ ಇಲ್ಲದೆ ಗ್ಯಾರಂಟಿ ಯೋಜನೆ ಜಾರಿ ಎಂದ ಸಿದ್ದರಾಮಯ್ಯ, ಈ ಆರ್ಥಿಕ ವರ್ಷದಲ್ಲಿ ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿಗಳನ್ನು ಮಾಡುತ್ತೇವೆ ಎಂದು ತಿಳಿಸಿದರು

ಎರಡನೇ ಯೋಜನೆ ‘ಗೃಹಲಕ್ಷ್ಮಿ’ಯನ್ನು ಆಗಸ್ಟ್ 15 ರಂದು ಅನುಷ್ಠಾನಕ್ಕೆ ತರಲಾಗುವುದು, ಈ ಯೋಜನೆಯಡಿ ಬಿಪಿಎಲ್ , ಎಪಿಎಲ್ ಖಾತೆದಾರರ ಮನೆ ಯಜಮಾನಿ ಖಾತೆಗೆ ಹಣ ಮಾಡಲಾಗುವುದು, ಆದರೆ, ಯೋಜನೆ ಫಲಾನುಭವಿಗಳು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಸಲ್ಲಿಸಬೇಕು, ಜೂನ್ 15 ರಿಂದ ಜುಲೈ 15ರೊಳಗೆ ಅರ್ಜಿ ಸಲ್ಲಿಸಬೇಕು ಎಂದರು. ಸಾಮಾಜಿಕ ಭದ್ರತೆ ಪಿಂಚಣಿದಾರರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದರು.

3ನೇ ಗ್ಯಾರಂಟಿ ಅನ್ನಭಾಗ್ಯ ಯೋಜನೆಯಡಿ ಜುಲೈ 1 ರಿಂದ ಎಲ್ಲಾ ಬಿಪಿಎಲ್ ಕಾರ್ಡ್ ದಾರರು ಮತ್ತು ಅಂತ್ಯೋದಯ ಫಲಾನುಭವಿಗಳಿಗೆ ತಲಾ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

4ನೇ ಗ್ಯಾರಂಟಿ ಶಕ್ತಿ: ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದಲ್ಲಿನ ಎಲ್ಲಾ ಮಹಿಳೆಯರು ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಗೆ ಈ ತಿಂಗಳು 11 ನೇ ತಾರೀಖು ಚಾಲನೆ ನೀಡಲಾಗುವುದು, ಬೆಂಗಳೂರಿನಿಂದ ತಿರುಪತಿ, ಬೆಂಗಳೂರಿನಿಂದ ಹೈದರಾಬಾದ್‌ಗೆ ಅವಕಾಶ ವಿಲ್ಲ. ಎಸಿ ಮತ್ತು ಲಕ್ಸುರಿ ಬಸ್ ಹೊರತುಪಡಿಸಿ ಸಾಮಾನ್ಯ ಬಸ್ ಗಳಿಗೆ ಮಾತ್ರ ಅನ್ವಯವಾಗಲಿದೆ. ಕೆಎಸ್ ಆರ್ ಟಿ ಸಿ ಬಸ್ ನಲ್ಲಿ ಶೇ.50 ರಷ್ಟು ಸೀಟು ಪುರುಷರಿಗೆ ಮೀಸಲು, ಐರಾವತ, ರಾಜಹಂಸ ಸೇರಿ ಎಲ್ಲ ರೀತಿಯ ಲಕ್ಸ್ಯೂರಿ, ಎಸಿ ಮತ್ತು ನಾನ್ ಎಸಿ ಸ್ಲೀಪರ್ ಬಸ್ ಗಳಿಗೆ ಇದು ಅನ್ವಯವಾಗಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.