ಬೆಂಗಳೂರು:ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಕೇಂದ್ರ ಸರ್ಕಾರದಿಂದ ಎಲ್ಲವೂ ನಿಯಮ ಬಾಹಿರ ಆಗಿದೆ. ರೈತರಿಗೆ ಕಷ್ಟ ಇದೆ. ತೀವ್ರ ಬರಗಾಲದಿಂದ ತತ್ತರಿಸಿರುವ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವಂತೆ ಮೇಲಿಂದ ಮೇಲೆ ಮನವಿ ಮಾಡಿದರೂ ಹಣ ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿಎಂ, ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದರೂ ಕೂಡ ಕೇಂದ್ರ ಸರ್ಕಾರ ಇನ್ನೂ ಬರ ಪರಿಹಾರ ಘೋಷಣೆ ಮಾಡಿಲ್ಲ. ಐದು ತಿಂಗಳ ಕಾಲ ಕಾದರೂ ಇನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಬರ ಪರಿಹಾರ ಕೊಡಿಸುವಂತೆ ಸುಪ್ರೀಂ ಕೋರ್ಟ್ನಲ್ಲಿ ಆರ್ಟಿಕಲ್ 32ರ ಅಡಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ವಾರದ ರಜೆ ಮುಗಿದ ಬಳಿಕ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲಿದೆ. ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದು ಸಿಎಂ ಹೇಳಿದರು.
ರಾಜ್ಯದ ಬರಗಾಲದ ಕುರಿತು ಕಳೆದ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ರಾಜ್ಯ ಸರ್ಕಾರ ಅಧ್ಯಯನ ನಡೆಸಿತು. ಅಧ್ಯಯನ ಬಳಿಕ ರಾಜ್ಯದಲ್ಲಿ 223 ತಾಲೂಕುಗಳು ಬರಪೀಡಿತ ಎಂದು ಘೋಷಿಸಿದ್ದೇವೆ. ಇದರಲ್ಲಿ 196 ತಾಲೂಕುಗಳು ತೀವ್ರ ಬರಗಾಲದಿಂದ ಕೂಡಿವೆ. ಬರಗಾಲದಿಂದ 48 ಲಕ್ಷ ಹೆಕ್ಟೇರ್ ಪ್ರದೇಶ ಕೃಷಿ, ತೋಟಗಾರಿಕೆ ಬೆಳೆ ನಷ್ಟ ಆಗಿದೆ. ಅಧ್ಯಯನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರಕ್ಕೆ 2023ರ ಸೆಪ್ಟೆಂಬರ್ 23, ನವೆಂಬರ್ 15 ಮತ್ತು ಅಕ್ಟೋಬರ್ 20 ಎಂದು ಮೂರು ಬಾರಿ ಮನವಿ ಸಲ್ಲಿಸಿದ್ದೇವೆ ಎಂದರು.
ಮೊದಲ ಮನವಿ ಕೊಟ್ಟ ಬಳಿಕ, ಒಂದು ವಾರದೊಳಗೆ ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿ ಅಧ್ಯಯನ ನಡೆಸಬೇಕು. ಆದರೆ ಕೇಂದ್ರದ ತಂಡ ಅಕ್ಟೋಬರ್ ತಿಂಗಳಲ್ಲಿ ಬಂದಿದ್ದತ್ತು. ಅ.9 ರಿಂದ 14ರ ವರೆಗೆ 10 ಅಧಿಕಾರಿಗಳು ಮೂರು ತಂಡ ಪರಿಶೀಲನೆ ನಡೆಸಿದೆ. ಪರಿಶೀಲನೆ ಬಳಿಕ ತಂಡ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ವರದಿ ನೀಡಿ ಒಂದು ತಿಂಗಳಲ್ಲಿ ಆಯಾ ರಾಜ್ಯಗಳಿಗೆ ಪರಿಹಾರ ಕೊಡಬೇಕು. ಆದರೆ ಇದುವರೆಗೂ ಯಾವುದೇ ಪರಿಹಾರ ಬಿಡುಗಡೆ ಮಾಡಿಲ್ಲ. ಬರ ಪರಿಹಾರವನ್ನು ಕೇಂದ್ರ ಸರ್ಕಾರ ಶೇ.75ರಷ್ಟು ಮತ್ತು ರಾಜ್ಯ ಸರ್ಕಾರ ಶೇ.25ರಷ್ಟು ನೀಡುತ್ತವೆ ಎಂದು ಸಿಎಂ ತಿಳಿಸಿದರು.
ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಕಾಯ್ದೆ ಉಲ್ಲಂಘಿಸಿದೆ. ಕಾನೂನು ಮಾಡೋದು ಸಂವಿಧಾನದ ಅಡಿಯಲ್ಲಿ ಅಲ್ವಾ? ನಿಯಮ ಮೀರಿದರೇ ಕೋರ್ಟ್ನಲ್ಲಿ ನ್ಯಾಯ ಕೇಳಬೇಕು ಅಲ್ವಾ? ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಕೇಂದ್ರ ಸರ್ಕಾರದಿಂದ ಎಲ್ಲವೂ ನಿಯಮ ಬಾಹಿರ ಆಗಿದೆ. ರೈತರಿಗೆ ಕಷ್ಟ ಇದೆ ಎಂದು ನಾವು ತಾತ್ಕಾಲಿಕವಾಗಿ 2,000 ರೂ. ಕೊಟ್ಟಿದ್ದೇವೆ. 33 ಲಕ್ಷದ 44 ಸಾವಿರ ರೈತರಿಗೆ 650 ಕೋಟಿ ಬಿಡುಗಡೆ ಮಾಡಿದ್ದೇವೆ.