ಪಿರಿಯಾಪಟ್ಟಣ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಇಡೀ ರಾಜ್ಯದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ.
ಇದರಿಂದ ಅಂತರ್ಜಲ ಮಟ್ಟ ಹೆಚ್ಚಳ ಆಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.
ಬುಧವಾರ ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತಿನ ಮುಳುಸೋಗೆ ಗ್ರಾಮದ ಹತ್ತಿರ ಕಾವೇರಿ ನದಿಯಿಂದ ನೀರೆತ್ತಿ ೭೯ ಗ್ರಾಮಗಳಲ್ಲಿ ಬರುವ ೧೫೦ ಕೆರೆಗಳು ಹಾಗೂ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,೨೦೧೭ ರಲ್ಲಿ ನಾನು ಈ ಯೋಜನೆಗೆ ಮಂಜೂರು ಮಾಡಿ ಚಾಲನೆ ನೀಡಿದ್ದೆ. ಪಿರಿಯಾಪಟ್ಟಣ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಇದೆ, ಈ ಯೋಜನೆಯಿಂದ ೧೫೦ ಕೆರೆಗಳಿಗೆ ನೀರು ತುಂಬಿಸುವುದರಿAದ ಅಂತರ್ಜಲ ಹೆಚ್ಚಳ ಆಗಿ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯುತ್ತದೆ. ಇದರಿಂದ ೭೯ ಗ್ರಾಮಗಳ ೯೩ ಸಾವಿರ ಜನರಿಗೆ ಅನುಕೂಲ ಆಗುತ್ತದೆ ಎಂದರು.
ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರ. ನಾವು ನೀರಾವರಿ ಯೋಜನೆಗೆ ಪ್ರತಿ ವರ್ಷ ೧೦ ಸಾವಿರ ಕೋಟಿ ಖರ್ಚು ಮಾಡುವುದಾಗಿ ವಾಗ್ದಾನ ಮಾಡಿದ್ದೆವು, ಅದರಂತೆ ೫ ವರ್ಷಗಳಲ್ಲಿ ೫೬ ಸಾವಿರ ಕೋಟಿ ಖರ್ಚು ಮಾಡಿದೆವು. ರಾಜ್ಯದ ೨೨೩ ತಾಲ್ಲೂಕುಗಳಲ್ಲಿ ಬರಗಾಲ ಇದೆ. ಆದರೂ ಜನರಿಗೆ ನೀರಿನ ಸಮಸ್ಯೆ ಆಗದಂತೆ ಕಾರ್ಯ ನಿರ್ವಹಿಸಿದ್ದೇವೆ. ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ ಆದರೆ ಇನ್ನೂ ಬರ ಪರಿಹಾರ ಬಿಡುಗಡೆ ಆಗಿಲ್ಲ ಎಂದು ತಿಳಿಸಿದರು.
ಎಲ್ಲಾ ಧರ್ಮದ, ಎಲ್ಲಾ ಜಾತಿಯ ಜನರು ಒಂದು ಕುಟುಂಬದoತೆ ಇರಬೇಕು. ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ ೫ ಗ್ಯಾರೆಂಟಿ ಗಳನ್ನು ಜಾರಿಗೆ ತಂದಿದ್ದೇವೆ. ಈ ೫ ಗ್ಯಾರೆಂಟಿ ಗಳಿಗೆ ೩೮ ಸಾವಿರ ಕೋಟಿ ಹಾಗೂ ಮುಂದಿನ ವರ್ಷದಲ್ಲಿ ೫೮ ಸಾವಿರ ಕೋಟಿ ರೂಗಳನ್ನು ಖರ್ಚು ಮಾಡುತ್ತೇವೆ. ೪.೫ ಕೋಟಿ ಜನರಿಗೆ ಪ್ರತಿ ತಿಂಗಳು ೪ ರಿಂದ ೫ ಸಾವಿರ ಮೌಲ್ಯದ ಸೌಲಭ್ಯಗಳು ಸಿಗುತ್ತಿವೆ ಎಂದು ತಿಳಿಸಿದರು.