ಬೆಂಗಳೂರು: ಬಿಜೆಪಿ ಪ್ರಜಾಪ್ರಭುತ್ವ ಮೌಲ್ಯವನ್ನು ನಾಶ ಮಾಡುತ್ತಿದೆ. ಜನರ ಅಭಿಪ್ರಾಯ ಅವರ ಪರವಾಗಿ ಇಲ್ಲ ಎಂದು ಗೊತ್ತಾಗಿದೆ. ಅದಕ್ಕಾಗಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಜನರ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.
‘ಆಪರೇಷನ್ ಕಮಲ’ದ ಭಾಗವಾಗಿ ಆಡಳಿತಾರೂಢ ಕಾಂಗ್ರೆಸ್ ಶಾಸಕರಿಗೆ ರಾಜೀನಾಮೆ ನೀಡಲು ಬಿಜೆಪಿ ತಲಾ 50 ಕೋಟಿ ರೂಪಾಯಿ ಆಮಿಷ ಒಡ್ಡುತ್ತಿದೆ ಮತ್ತು ಅವರು ರಾಜೀನಾಮೆ ನೀಡಿದ ನಂತರ ಉಪಚುನಾವಣೆಯಲ್ಲೂ ಹಣ ನೀಡುವುದಾಗಿ ಭರವಸೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಆರೋಪಿಸಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ಬಿಜೆಪಿ “ಆಪರೇಷನ್ ಕಮಲ” ಮೂಲಕ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಇವತ್ತೂ ಕೂಡಾ ಈ ಪ್ರಯತ್ನ ನಡೆಯುತ್ತಿದೆ. ಇವಾಗ ಶಾಸಕರಿಗೆ ಐವತ್ತು ಕೋಟಿ ಆಫರ್ ನೀಡುತ್ತಿದ್ದಾರೆ. ರಾಜೀನಾಮೆ ಕೊಡಿ, ಚುನಾವಣಾ ಖರ್ಚು ನಾವೇ ನೋಡಿಕೊಳ್ಳುತ್ತೇವೆ ಎಂಬ ಭರವಸೆಯನ್ನು ಕೊಡ್ತಾರೆ ಎಂದು ಆರೋಪಿಸಿದರು. ಈ ಹಣ ಎಲ್ಲಿಂದ ಬರುತ್ತದೆ? ಇದು ಕಪ್ಪು ಹಣ ಅಲ್ಲವೇ? ಎಂದು ಪ್ರಶ್ನಿಸಿದರು.
“ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತಿದೆ; ಆದರೆ ಅಕ್ರಮವಾಗಿ ಆಸ್ತಿ ಗಳಿಸಿದ ಶ್ರೀಮಂತರು ವಿರೋಧ ಪಕ್ಷಗಳಲ್ಲಿ ಮಾತ್ರ ಇದ್ದಾರೆಯೇ? ಬಿಜೆಪಿಯಲ್ಲಿ ಯಾರೂ ಇಲ್ಲವೇ? ಅವರು (ಬಿಜೆಪಿ) ಭ್ರಷ್ಟಾಚಾರದ ಪಿತಾಮಹ” ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಬಿಜೆಪಿ ಈ ಹಿಂದೆಯೂ ಆಪರೇಷನ್ ಕಮಲ ನಡೆಸಿತ್ತು. “ಅವರು(ಬಿಜೆಪಿ) ರಾಜೀನಾಮೆ ನೀಡಿದ ಶಾಸಕರಿಗೆ ಕೋಟಿ ಕೋಟಿ ರೂಪಾಯಿ ಹಣವನ್ನು ನೀಡಿದರು ಮತ್ತು ಉಪಚುನಾವಣೆಗಳಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ಖರ್ಚು ಮಾಡಿದರು ಎಂದರು.