ವಿಶೇಷ ವರದಿ
ಬೆಳಗಾವಿ: ಜಿಲ್ಲೆಯ ಬಿಜೆಪಿ ನಾಯಕರ ವಿರೋಧದ ನಡುವೆಯೂ ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರಗೆ ನಿರೀಕ್ಷಿತ ಪ್ರಮಾಣದಲ್ಲಿ ಜಿಲ್ಲೆಯ ಬಿಜೆಪಿಯ ಮುಖಂಡರ ಸಹಕಾರ ಸಿಗುತ್ತಿಲ್ಲ ಎಂಬ ಚರ್ಚೆ ಬಿಜೆಪಿ ಕಾರ್ಯಕರ್ತರ ಪಾಳಯದಲ್ಲಿ ನಡೆಯುತ್ತಿದೆ.
ವಲಸೆ ವ್ತಕ್ತಿಯಾಗಿರುವ ಜಗದೀಶ್ ಶೆಟ್ಟರ್ ಸ್ಪರ್ಧೆಯಿಂದ ಬಿಜೆಪಿ ಪಾಳಯದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಅಸಮಾಧಾನದ ಹೊಗೆಯಾಡುತ್ತಿದೆ.
ಕಳೆದ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಬಿಜೆಪಿಯಲ್ಲಿ ಮುನಿಸಿಕೊಂಡು ಕಾಂಗ್ರೆಸ್ ಸೇರಿದ್ದರು. ಬಳಿಕ ಬಿಜೆಪಿ ಸೇರಿದ ನಂತರ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಚುನಾವಣೆ ಘೊಷಣೆ ಬಳಿಕ ದಟ್ಟವಾಗಿದ್ದ ಜಗದೀಶ್ ಶೆಟ್ಟರ್ ಬೆಳಗಾವಿಯಿಂದ ಸ್ಪರ್ಧೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಗೋ ಬ್ಯಾಕ್ ಶೆಟ್ಟರ್ ಎಂಬ ಅಭಿಯಾನವನ್ನು ನಡೆಸಲಾಯಿತು. ಇದು ಅಲ್ಲದೆ
ರಾಜ್ಯಸಭೆಯ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ ಅವರ ನಿವಾಸದಲ್ಲಿ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ , ಸಂಸದೆ ಮಂಗಳಾ ಅಂಗಡಿ ಅವರನ್ನು ಹೊರತುಪಡಿಸಿ ಇನ್ನೂಳಿದ ನಾಯಕರು ಸಭೆ ಸೇರಿದ್ದ ಜಿಲ್ಲೆಯ ಬಿಜೆಪಿ ನಾಯಕರು, ಜಗದೀಶ್ ಶೆಟ್ಟರ್ ಬೆಳಗಾವಿಯಿಂದ ಸ್ಪರ್ಧೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ವಲಸೆ ನಾಯಕರ ಬದಲಿಗೆ ಜಿಲ್ಲೆಯ ನಾಯಕರಿಗೆ ಟಿಕೆಟ್ ನೀಡಬೇಕು ಎಂದು ಹೇಳಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ನಾಯಕರು ಬಿಜೆಪಿ ಹೈಕಮಾಂಡ ಭೇಟಿ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೀಗ ಜಾರಕಿಹೊಳಿ ಬ್ರದರ್ಸ್ ಹಾಗೂ ಮಂಗಳಾ ಅಂಗಡಿ ಹೊರತುಪಡಿಸಿ ಇನ್ನೂಳಿದ ನಾಯಕರ ವಿರೋಧದ ನಡುವೆಯೂ ಬಿಜೆಪಿ ಹೈಕಮಾಂಡ ಅಳೆದು ತೂಗಿ ಕೊನೆಗೆ ಜಗದೀಶ್ ಶೆಟ್ಟರ್ ಅವರನ್ನು ಕಲ ಅಧಿಕೃತ ಹುರಿಯಾಳು ಎಂದು ಘೋಷಣೆ ಮಾಡಿದೆ. ಇದು ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರಿಗೂ ಹಾಗೂ ಸ್ಥಳೀಯ ನಾಯಕರ ವಿರೋಧದ ನಡುವೆ ಟಿಕೆಟ್ ಗಿಟ್ಟಿಸಿಕೊಂಡಿರುವ ಶೆಟ್ಟರ್ ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನ ಬಿರುಗಾಳಿಯನ್ನು ನಿಯಂತ್ರಣ ಮಾಡುವುದು ಸದ್ಯ ಬಿಜೆಪಿ ನಾಯಕರಿಗೆ ಹಾಗೂ ಜಗದೀಶ್ ಶೆಟ್ಟರ್ ಗೆ ಸವಾಲಾಗಿದೆ ಪರಿಣಮಿಸಿದೆ.