ಬೆಂಗಳೂರು:ಮೋದಿ ಸರ್ಕಾರ ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡದೆ ರೈತರು ಮತ್ತು ಕರ್ನಾಟಕದ ಜನರ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆಂಗಳೂರಿಗೆ ಭೇಟಿ ನೀಡುವುದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಲು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ವಿಧಾನ ಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಳೆದಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು. ಬರದಿಂದ ಕರ್ನಾಟಕದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದ ಸಿಎಂ ಸಿದ್ದರಾಮಯ್ಯ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಬರ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು
‘ಕರ್ನಾಟಕಕ್ಕೆ ನ್ಯಾಯ ಕೊಡಿ, ಬರ ಪರಿಹಾರ ಕೂಡಲೇ ಬಿಡುಗಡೆ ಮಾಡಿ ಚೊಂಬೇಶ್ವರ’ ಎಂದು ಒಕ್ಕೊರಲಿನಿಂದ ಕಾಂಗ್ರೆಸ್ ನಾಯಕರು ಆಗ್ರಹಿಸಿದರು. ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ಘೋಷಣೆ ಕೂಗಿದರು. ಕರ್ನಾಟಕಕ್ಕೆ ಬಿಜೆಪಿ ಖಾಲಿ ಚೊಂಬು ಕೊಟ್ಟಿದೆ, ಆದ್ದರಿಂದ ಬೇಡ ಬೇಡ ಖಾಲಿ ಚೊಂಬು ಬೇಡ, ನರೇಂದ್ರ ಚೊಂಬೇಶ್ವರನಿಗೆ, ಭಾರತೀಯ ಚೊಂಬು ಪಾರ್ಟಿಗೆ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮೋದಿ ಗೋ ಬ್ಯಾಕ್, ಗೋಬ್ಯಾಕ್ ಗೋ ಬ್ಯಾಕ್ ಅಮಿತ್ ಶಾ, ಗೋ ಬ್ಯಾಕ್ ನಿರ್ಮಲಾ ಸೀತಾರಾಮನ್ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಗೋ ಬ್ಯಾಕ್ ಅಮಿತ್ ಶಾ: ಇನ್ನೊಂದೆಡೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದು, ಗೋ ಬ್ಯಾಕ್ ಅಮಿತ್ ಶಾ ಎಂದು ಕಾಂಗ್ರೆಸ್ ನಾಯಕರು ಘೋಷಣೆ ಕೂಗಿದರು. ಬರ ಪರಿಹಾರಕ್ಕಾಗಿ 18,172 ಕೋಟಿ ರೂಪಾಯಿ ಬಿಡುಗಡೆ ಮಾಡದೆ ಕರ್ನಾಟಕದ ನೆಲದಲ್ಲಿ ಕಾಲಿಡಲು ಅವರಿಗೆ ಯಾವುದೇ ಹಕ್ಕಿಲ್ಲ, ಕೇಂದ್ರ ನಾಯಕರಿಗೆ ಧಿಕ್ಕಾರ ಎಂದು ಕೂಗಿದರು.
ಕರ್ನಾಟಕಕ್ಕೆ ಭಾರೀ ಅನ್ಯಾಯವಾಗುತ್ತಿದೆ. ಮೋದಿ ಸರಕಾರ ಕರ್ನಾಟಕದ ರೈತರು ಮತ್ತು ಜನರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ. ಇಂದು ಅಮಿತ್ ಶಾ ಬರುತ್ತಿದ್ದಾರೆ, ಅವರಿಗೆ ಈ ನೆಲದಲ್ಲಿ ಕಾಲಿಡುವ ಹಕ್ಕಿಲ್ಲ. ಕರ್ನಾಟಕಕ್ಕೆ 18,172 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ನಮ್ಮ ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ನ್ಯಾಯ ಕೊಡಿಸಲು ಇಂದು ಧರಣಿ ಕೂತಿದ್ದಾರೆ. ನಮ್ಮ ಹಣ ಬಿಡುಗಡೆ ಮಾಡದೆ ಅಮಿತ್ ಶಾ ಕರ್ನಾಟಕಕ್ಕೆ ಹೇಗೆ ಬರುತ್ತಾರೆ ಎಂದು ಸುರ್ಜೆವಾಲಾ ಪ್ರಶ್ನಿಸಿದರು.
ಶಾಸಕ ರಿಜ್ವಾನ್ ಅರ್ಷದ್, ನಮ್ಮ ಪರಿಹಾರದ ಹಣ ನೀಡಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೋಗಬೇಕಾಯಿತು. ಮೋದಿ ಸರ್ಕಾರವು ಈ ವಾರ ಪರಿಹಾರವನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ. ನಮ್ಮ ಹಕ್ಕುಗಳಿಗಾಗಿ ನ್ಯಾಯಾಲಯಕ್ಕೆ ಹೋಗುವ ಅಗತ್ಯ ಏನಿದೆ ಎಂದು ರಿಜ್ವಾನಾ ಪ್ರಶ್ನಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ ವಿರುದ್ಧ ಕಣಕ್ಕಿಳಿದಿದ್ದಾರೆ.