ಮೈಸೂರು,ಮಾ 23:ರೈತ ವಿರೋಧಿ, ಕಾರ್ಮಿಕ ವಿರೋಧ, ದುಡಿಯುವ ವರ್ಗದ ವಿರೋಧಿ ಮೋದಿ ಸರ್ಕಾರವನ್ನು ಕಿತ್ತೊಗೆಯಬೇಕು .ಬಿಜೆಪಿ ಮೈತ್ರಿಕೂಟ ಸೋಲಿಸಿ ರೈತ ಸಮುದಾಯವನ್ನು ಉಳಿಸಿ ಎಂದು ಅಭಿಯಾನವನ್ನ ಆರಂಭಿಸುತ್ತೇವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ರಾಜ್ಯ ರೈತ ಸಂಘದ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಡಗಲಪುರ ನಾಗೇಂದ್ರ, 2024ರ ಲೋಕಸಭಾ ಚುನಾವಣೆ ರೈತರು, ಕಾರ್ಮಿಕರು ಮತ್ತು ದುಡಿಯುವ ವರ್ಗಕ್ಕೆ ಬಹಳ ಮುಖ್ಯವಾದ ಚುನಾವಣೆಯಾಗಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆ ಬಹಳ ಮುಖ್ಯವಾಗಿದೆ. ಈ ಬಾರಿ ಬಿಜೆಪಿ ಮತ್ತು ಮೈತ್ರಿಕೂಟ ಪಕ್ಷಗಳ ವಿರುದ್ಧ ಹೋರಾಟವನ್ನ ಮಾಡುತ್ತೇವೆ. ಬಿಜೆಪಿ ಮೈತ್ರಿಕೂಟ ಸೋಲಿಸಿ ರೈತ ಸಮುದಾಯವನ್ನು ಉಳಿಸಿ ಎಂದು ಅಭಿಯಾನವನ್ನ ಆರಂಭಿಸುತ್ತೇವೆ. ರಾಜ್ಯಾದ್ಯಂತ 1 ಕೋಟಿ ಕರ ಪತ್ರಗಳನ್ನ ಹಂಚಿ ಎನ್ ಡಿಎ ವಿರುದ್ಧ ಕ್ಯಾಂಪೇನ್ ಮಾಡುತ್ತೇವೆ. ಇದಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕವೂ ಕೂಡ ಬಿಜೆಪಿ ವಿರುದ್ಧ ಅಭಿಯಾನ ಮಾಡುತ್ತೇವೆ. ಭಾರತದ ಪ್ರಜಾಪ್ರಭುತ್ವ ಉಳಿವಿಗಾಗಿ ಬಿಜೆಪಿಯನ್ನ ಸೋಲಿಸಬೇಕಾಗಿದೆ.
ನಾವು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತೇವೆಯೇ ಹೊರತು ನಾವು ಇದೇ ಪಕ್ಷಕ್ಕೆ ಮತ ಹಾಕಿ ಅಂತ ಎಲ್ಲೂ ಹೇಳಲ್ಲ. ಮತದಾನ ಎಲ್ಲರೂ ಮಾಡಿ ಸೂಕ್ತ ಅಭ್ಯರ್ಥಿಗಳಿಗೆ ಮತಹಾಕಿ ಎಂದು ಬಡಗಲಪುರ ನಾಗೇಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಹೊಸಕೋಟೆ ಬಸವರಾಜು, ಪ್ರಸನ್ನಕುಮಾರ್ ಸೇರಿದಂತೆ ಇತರರು ಭಾಗಿಯಾಗಿದ್ದರು.