ಬೆಂಗಳೂರು: ಬರ ಪರಿಹಾರದ ವಿಚಾರದಲ್ಲಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡುವ ಮೂಲಕ ನ್ಯಾಯಾಲಯದ ಹಾದಿ ತಪ್ಪಿಸುವ ಪ್ರಯತ್ನ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೂ ತಪ್ಪು ಮಾಹಿತಿ ನೀಡಿ ನ್ಯಾಯಾಲಯದ ಹಾದಿ ತಪ್ಪಿಸುವ ಪ್ರಯತ್ನ ಮಾಡಿರುವುದು ವಿಷಾದನೀಯ ಎಂದು ಹೇಳಿದ್ದಾರೆ.
ಮುಂದುವರೆದು, ಕಳೆದ ಎರಡು ಮೂರು ತಿಂಗಳ ಅವಧಿಯಲ್ಲಿ ನಾನು ಮತ್ತೆ ಮತ್ತೆ ಹೇಳಿರುವಂತೆ ಬರಗಾಲಕ್ಕೆ ಪರಿಹಾರ ಕೋರಿ ನಮ್ಮ ಸರ್ಕಾರ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿಯೇ ನಷ್ಟದ ವಿವರ ಮತ್ತು ನಿರೀಕ್ಷಿತ ಪರಿಹಾರದ ಮೊತ್ತವನ್ನು ಒಳಗೊಂಡ ಮನವಿ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಿದ್ದರಾಮಯ್ಯ ಅವರು “ಕರ್ನಾಟಕಕ್ಕೆ ಬರ ಪರಿಹಾರ ನೀಡದೆ ಕೇಂದ್ರ ಸರ್ಕಾರ ಕಳೆದ ಐದಾರು ತಿಂಗಳುಗಳಿಂದ ಸತಾಯಿಸುತ್ತಿರುವುದನ್ನು ಕಂಡು ಬೇರೆ ದಾರಿ ಕಾಣದೆ ನ್ಯಾಯ ಕೋರಿ ನಮ್ಮ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿತ್ತು. ಇಂದು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಬರ ಪರಿಹಾರ ವಿಳಂಬಕ್ಕೆ ಕರ್ನಾಟಕ ಸರ್ಕಾರವೇ ಕಾರಣ. ಇದರ ಹಿಂದೆ ರಾಜಕೀಯ ಉದ್ದೇಶ ಇದೆ ಎಂಬ ಅಭಿಪ್ರಾಯ ಮೂಡುವ ವಾದ ಮಂಡಿಸಿರುವುದು ಖಂಡನೀಯ ಎಂದಿದ್ದಾರೆ.
ಬರ ಪರಿಹಾರಕ್ಕಾಗಿ ಕರ್ನಾಟಕ ಸರ್ಕಾರ ನಮ್ಮನ್ನುವನ್ನು ಸಂಪರ್ಕಿಸಬಹುದಿತ್ತು. ಈ ಅರ್ಜಿ ಸಲ್ಲಿಸಿರುವ ಸಮಯದ ಮಹತ್ವ ನಮಗೆ ಅರ್ಥವಾಗುತ್ತದೆ. ಈ ಅರ್ಜಿಗೆ ಪ್ರತಿಕ್ರಿಯೆ ಕೋರಿ ನಮಗೆ ನೋಟೀಸ್ ನೀಡಬಾರದು. ಹಾಗೆ ಮಾಡಿದರೆ ಅದು ಸುದ್ದಿಯಾಗುತ್ತದೆ ಎಂದು ಮೆಹ್ತಾ ಅವರು ನ್ಯಾಯಾಲಯದಲ್ಲಿ ಹೇಳಿರುವುದು ಕೇಂದ್ರ ಸರ್ಕಾರದ ವೈಫಲ್ಯ ಮುಚ್ಚಿಹಾಕಲು ಕರ್ನಾಟಕ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನವಾಗಿದೆ ಎಂದು ಅವರು ವಿವರಿಸಿದ್ದಾರೆ.
ಅದರ ನಂತರ ನಾನು ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ನೀಡಿದ್ದೆವು. ನಮ್ಮ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರತ್ಯೇಕವಾಗಿ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿದ್ದರು. ಹೀಗಿದ್ದರೂ ಕರ್ನಾಟಕ ಸರ್ಕಾರ ವಿಳಂಬವಾಗಿ ಮನವಿ ಸಲ್ಲಿಸಿದೆ ಎಂದು ಕೇಂದ್ರ ಹಣಕಾಸು ಮತ್ತು ಗೃಹಸಚಿವರು ಯಾವ ಮುಜುಗರ ಇಲ್ಲದೆ ಸುಳ್ಳು ಹೇಳುತ್ತಾ ಬಂದಿದ್ದಾರೆ. ಇಂದು ಇದೇ ಸುಳ್ಳನ್ನು ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮುಂದೆಯೂ ಹೇಳಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರದ ವಿರುದ್ಧ ಆರೋಪ ಮಾಡಿದ್ದಾರೆ.