ರಾಮದುರ್ಗ :ಮತಕ್ಷೇತ್ರದ ಆಕಾಂಕ್ಷಿಗಳನ್ನು ಕಡೆಗಣಿಸುವ ಜೊತೆಗೆ ತಾಲೂಕಿನಲ್ಲಿ ಅಧಿಕ ಸಂಖ್ಯೆಯಲ್ಲಿರುವ ಪಂಚಮಸಾಲಿ ಮಸಾಜದ ಮುಖಂಡ ಪಿ.ಎಫ್. ಪಾಟೀಲ ಅವರಿಗೆ ಬಿಜೆಪಿ ಹೈ ಕಮಾಂಡ ಟಿಕೇಟ್ ಘೋಷಣೆ ಮಾಡದೇ ಇರುವುದು ಖಂಡನೀಯ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ವಿರೋಧಿ ಬಿಜೆಪಿ ತಾಲೂಕಾ ಯುವ ಘಟಕದ ಅಧ್ಯಕ್ಷ ಜಿ.ವ್ಹಿ. ನಾಡಗೌಡ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತೀಯ ಜನತಾ ಪಕ್ಷದ ಮೂಲ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಿದೆ. ಅದನ್ನು ಹೊರತುಪಡಿಸಿ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಯಾಗಿ ನಿನ್ನೆ ಮೊನ್ನೆ ಬಂದವರಿಗೆ ಪಕ್ಷ ಯಾವ ತತ್ವ ಸಿದ್ಧಾಂತದ ಆಧಾರದ ಮೇಲೆ ಟಿಕೇಟ್ ಘೋಷಣೆ ಮಾಡಿದ್ದಾರೆ. ಹೈಕಮಾಂಡ ನಿರ್ಧಾರಕ್ಕೆ ಯಾವ ನೈತಿಕತೆ ಇದೆ ಎಂದು ಪಕ್ಷದ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುವಂತಾಗಿದೆ ಎಂದರು.
ತಾಲೂಕಿನ ಪಕ್ಷದ ಮೂಲ ಕಾರ್ಯಕರ್ತರಾಗಲಿ ಯಾವುದೇ ಸಮುದಾಯದ ಸ್ಥಳೀಯರಿಗೆ ಟಿಕೇಟ್ ನೀಡಿದರೂ ನಾವು ಒಪ್ಪಿಕೊಳ್ಳುತ್ತಿದ್ದೇವು. ಆದರೆ ಹೊರಗಿನಿಂದ ಬಂದ ವ್ಯಕ್ತಿಗೆ ಟಿಕೇಟ್ ಘೋಷಣೆ ಮಾಡಿದ್ದನ್ನು ಶೀಘ್ರ ಹಿಂಪಡೆದುಕೊಳ್ಳಬೇಕು. ತಾಲೂಕಿನಲ್ಲಿ ಅಧಿಕ ಸಂಖ್ಯಾಬಲವನ್ನು ಹೊಂದಿ ಇತರ ಸಮುದಾಯಗಳ ಪ್ರೀತಿ ವಿಶ್ವಾಸ ಹೊಂದಿರುವ ಪಂಚಮಸಾಲಿ ಮುಖಂಡ ಪಿ.ಎಫ್. ಪಾಟೀಲ ಸೇರಿ ಸಮಾಜದ ವ್ಯಕ್ತಿಗಳಿಗೆ ಟಿಕೇಟ್ ಘೋಷಣೆ ಮಾಡಬೇಕು. ಒಂದು ವೇಳೆ ಹೈ ಕಮಾಂಡ ಸಾಮಾನ್ಯ ಕಾರ್ಯಕರ್ತರ ಅಳಲು ಆಲಿಸದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ತಾಲೂಕಿನ ಪಕ್ಷದ ಕಾರ್ಯಕರ್ತರು ಮುಖಂಡರಲ್ಲಿ ಒಡಕು ಉಂಟಾಗಿ ಹಿನ್ನಡೆಯಾಗುವಲ್ಲಿ ಸಂದೇಹವಿಲ್ಲ ಎಂದು ಎಚ್ಚರಿಕೆ ನೀಡಿದರು.
ಗುರುವಾರ ಮುಂಜಾನೆ ೧೧ ಗಂಟೆಗೆ ತಾಲೂಕಿನ ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ತಾಲೂಕಿನ ಸರ್ವ ಸಮಾಜ ಬಾಂಧವರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಚರ್ಚಿಸಿ ಸಮಾಜದ ಮುಂದಿನ ನಡೆ ಪ್ರಕಟಿಸಬೇಕಾಗುತ್ತದೆ. ನಂತರ ಸಂಜೆ ಒಳವಾಗಿ ಸರ್ವ ಸಮುದಾಯಗಳ ಆಕಾಂಕ್ಷಿಗಳು, ಪಕ್ಷದ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಭೆಯ ನಂತರ ಮುಂದಿನ ನಡೆ ಕುರಿತು ನಿರ್ಣಯಿಸಲಾಗುತ್ತದೆ ಎಂದು ಹೇಳಿದರು.
ಸ್ಥಳೀಯ ಆಕಾಂಕ್ಷಿಗಳಾದ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ, ಪಿ.ಎಫ್. ಪಾಟೀಲ, ರಮೇಶ ದೇಶಪಾಂಡೆ, ಮಲ್ಲಣ್ಣ ಯಾದವಾಡ, ರೇಣಪ್ಪ ಸೋಮಗೊಂಡ, ಮಾರುತಿ ಕೊಪ್ಪದ, ರೇಖಾ ಚಿನ್ನಾಕಟ್ಟಿ, ವಿಜಯ ಗುಡದಾರಿ ಯಾರೇ ಆಗಲಿ ಅವರ ಗೆಲುವಿನ ಅರ್ಹತೆ ಅಳೆದು ಟಿಕೇಟ್ ನೀಡಿದ್ದರೆ ಸರ್ವ ಕಾರ್ಯಕರ್ತರು ಒಪ್ಪಿಕೊಳ್ಳುತ್ತಿದ್ದರು. ಸ್ಥಳೀಯರು ಇಲ್ಲದೇ ಹೋದಲ್ಲಿ ಹೊರಗಿನವರನ್ನು ಗೆಲವುವಾಗಲಿ,. ಸೋಲಾಗಲಿ ಯಾರನ್ನು ಸಂಪರ್ಕಿಸಬೇಕೆAಬ ಪ್ರಶ್ನೆ ಉದ್ಭವವಾಗುತ್ತದೆ. ಕೂಡಲೇ ಬದಲಾವಣೆ ಮಾಡಿ, ಸ್ಥಳೀಯರಿಗೆ ಬಿ.ಪಾರ್ಮ ನೀಡಿ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು ಎಂದು ಸಮುದಾಯದ ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಸಂಗಪ್ಪ ಪಾಕನಟ್ಟಿ, ಬಸನಗೌಡ ದ್ಯಾಮನಗೌಡ್ರ, ಸಿದ್ದನಗೌಡ ಪಾಟೀಲ, ರಮೇಶ ಪಾಕನಟ್ಟಿ ಪ್ರಕಾಶ ಹಂಚಿನಾಳ, ಶಂಕರಗೌಡ ಪಾಟೀಲ ಸೇರಿದಂತೆ ಇತರರಿದ್ದರು.