ಬೆಳಗಾವಿ:ಪ್ರಧಾನಿ ಕೂಡಾ ಅಮಿತ್ ಶಾ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಬಗ್ಗೆ ಗೃಹ ಸಚಿವ ಅಮಿತ್ ಶಾ ಆಡಿರುವ ಮಾತುಗಳಿಗೆ ಗುರುವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂಬೇಡ್ಕರ್ ಸಂವಿಧಾನ ಇಲ್ಲದಿದ್ದರೆ ಅಮಿತ್ ಶಾ ಗುಜರಿ ವ್ಯಾಪಾರ ಮಾಡಿಕೊಂಡು ಇರಬೇಕಾಗಿತ್ತು. ಸಭಾಪತಿ ಜಗದೀಪ್ ಧಂಕರ್ ಸಂವಿಧಾನಡಿ ನಿಜವಾಗಿಯೂ ಕಾರ್ಯನಿರ್ವಹಿಸುತ್ತಿದ್ದರೆ ಕೂಡಲೇ ಅಮಿತ್ ಶಾ ಅವರನ್ನು ಸದನದಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅಮಿತ್ ಶಾ ಹೇಳಿಕೆಯಲ್ಲಿ ಯಾವುದೇ ಅಚ್ಚರಿಯಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರ ಮನಸ್ಸಿನಲ್ಲಿರುವುದು ಸಾರ್ವಜನಿಕವಾಗಿ ಹೊರಗೆ ಬಂದಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಬಿಜೆಪಿಯ ಆಂತರಿಕ ಅಭಿಪ್ರಾಯವನ್ನು ದೇಶದ ಮುಂದೆ ಮುಕ್ತ ಮತ್ತು ಧೈರ್ಯವಾಗಿ ಹೇಳಿದ್ದಕ್ಕೆ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಂಬೇಡ್ಕರ್ ಸಂವಿಧಾನ ಇಲ್ಲದಿದ್ದರೆ ಅಮಿತ್ ಶಾ ಅವರ ಹಳ್ಳಿಯಲ್ಲಿ ಗುಜರಿ ವ್ಯಾಪಾರ ಮಾಡಿಕೊಂಡು ಇರಬೇಕಾಗಿತ್ತು. ದೇಶದ ಗೃಹ ಸಚಿವರಾಗುತ್ತಿರಲಿಲ್ಲ ಎಂದರು.
ಅಮಿತ್ ಶಾ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅಮಿತ್ ಶಾ ವಿರುದ್ಧವೂ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ಅವರು ನಿಜವಾಗಿಯೂ ಸಂವಿಧಾನದಡಿ ಕಾರ್ಯನಿರ್ವಹಿಸುತ್ತಿದ್ದರೆ ಅಮಿತ್ ಹೇಳಿಕೆ ನೀಡಿದ ನಂತರ ಅವರನ್ನು ಸದನದಿಂದ ಹಾಗೂ ಕೇಂದ್ರ ಸಚಿವ ಸ್ಥಾನದಿಂದ ವಾಜಗೊಳಿಸಬೇಕಿತ್ತು ಎಂದು ಹೇಳಿದರು.
ಬಿಜೆಪಿ ಮತ್ತು ಸಂಘಪರಿವಾರದ ಅಂಬೇಡ್ಕರ್ ದ್ವೇಷದ ಹಿಂದೆ ಸಂವಿಧಾನವೇ ಮುಖ್ಯ ಕಾರಣವಾಗಿದೆ. ಈ ಲಿಖಿತ ಸಂವಿಧಾನ ಜಾರಿಗೆ ಬರುವವರೆಗೂ ಭಾರತೀಯ ಸಮಾಜ ಮನುಸ್ಮೃತಿಯನ್ನು ಹೊಂದಿತ್ತು. ಅದು ಜಾತಿ ಮತ್ತು ಲಿಂಗ ತಾರತಮ್ಯವನ್ನು ಕಾನೂನನ್ನಾಗಿ ಮಾಡಿತು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಆಶಯ ಹೊಂದಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನೀಡಿದ್ದಲ್ಲದೆ, ಅಲ್ಲಿಯವರೆಗೆ ಜಾರಿಯಲ್ಲಿದ್ದ ಅಲಿಖಿತ ಸಂವಿಧಾನ ಮನುಸ್ಮೃತಿಯನ್ನು ಸುಟ್ಟರು ಎಂದು ಸಿದ್ದರಾಮಯ್ಯ ವಿವರಿಸಿದರು.
ಡಿಸೆಂಬರ್ 25, 1927 ರಂದು ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟುಹಾಕಿದ್ದ ಅಂಬೇಡ್ಕರ್, 22 ವರ್ಷಗಳ ನಂತರ ಅವರೇ ಹೊಸ ಸಂವಿಧಾನವನ್ನು ರಚಿಸಿದರು. ಅಂಬೇಡ್ಕರ್ ಬಗ್ಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ದ್ವೇಷ ಹೊಸದಲ್ಲ.
ಆರ್ ಎಸ್ ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್, ಅವರ ಉತ್ತರಾಧಿಕಾರಿ ಮಾಧವ್ ಸದಾಶಿವ ಗೋಳ್ವಾಲ್ಕರ್ ಮತ್ತು ಸಾವರ್ಕರ್ ಸೇರಿದಂತೆ ಆರೆಸ್ಸೆಸ್ ನಾಯಕರು ಸಂವಿಧಾನದ ವಿರುದ್ಧ ನೀಡಿದ ಹೇಳಿಕೆಗಳ ವಿವರಗಳು ಇತಿಹಾಸದ ಪುಟಗಳಲ್ಲಿವೆ. ನವೆಂಬರ್ 30, 1949 ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಿದರು. ನಾಲ್ಕು ದಿನಗಳ ನಂತರ ಆರ್ ಎಸ್ ಎಸ್ ಮುಖವಾಣಿಯ ಸಂಪಾದಕೀಯದಲ್ಲಿ ಸಂವಿಧಾನ ವಿರುದ್ಧ ಬರೆಯಲಾಗಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎನ್ನುವುದನ್ನು ಅಣಕಮಾಡಲಾಗಿತ್ತು. ಇಂದಿಗೂ ಕೂಡಾ ಆರ್ ಎಸ್ ಎಸ್ ಈ ಸಂಪಾದಕೀಯವನ್ನು ಸಮರ್ಥಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಗೋಳ್ವಾಲ್ಕರ್ ಕೂಡಾ ಅಂಬೇಡ್ಕರ್ ವಿರೋಧಿಸುತ್ತಿದ್ದರು. ಅವರ’Bunch of Thought’ ಪುಸ್ತಕವನ್ನು ಆರ್ ಎಸ್ ಎಸ್ ಸಂವಿಧಾನ ಎಂದು ಪರಿಗಣಿಸಲಾಗಿದೆ. ವೇದ ನಂತರ ಮನುಸ್ಮೃತಿ ಅತ್ಯಂತ ಪವಿತ್ರವಾದದ್ದು ಎಂದು ಅವರು ಹೇಳುತ್ತಿದ್ದರು. ಸಂವಿಧಾನ ಮತ್ತು ಅಂಬೇಡ್ಕರ್ ವಿರೋಧಿಸುವ ಆರ್‌ಎಸ್‌ಎಸ್ ಸಂಪಾದಕೀಯವನ್ನು ಬಿಜೆಪಿ ಅಥವಾ ಆರ್‌ಎಸ್‌ಎಸ್ ಇಲ್ಲಿಯವರೆಗೆ ತಿರಸ್ಕರಿಸಿಲ್ಲ.ಅಂಬೇಡ್ಕರ್ ಅನ್ನೋದು ನಿರಂತರ ಸ್ಮರಣೆ. ನಾವು ಉಸಿರಾಡುವವರೆಗೆ, ಸೂರ್ಯ ಮತ್ತು ಚಂದ್ರರು ಈ ಭೂಮಿಯ ಮೇಲೆ ಇರುವವರೆಗೂ ಅಂಬೇಡ್ಕರ್ ಅವರ ಸ್ಮರಣೆ ಇರುತ್ತದೆ. ಅಂಬೇಡ್ಕರ್ ಇಲ್ಲದಿದ್ದರೆ ನಾನು ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಿರಲಿಲ್ಲ.