ಹುಬ್ಬಳ್ಳಿ ಮಾ14 : ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ವಿಚಾರ ಮತ್ತೆ ಬಿಜೆಪಿಯಿಂದ ಉತ್ತರ ಕರ್ನಾಟಕದ ಲಿಂಗಾಯಿತರಿಗೆ ಅನ್ಯಾಯ? ಬಿಜೆಪಿ ಮುಖಂಡರ ವಿರುದ್ಧ ಮತ್ತೆ ಜಗದೀಶ ಶೆಟ್ಟರ್ ಅಸಮಾಧಾನ! ಲೋಕಸಭಾ ಸಭಾ ಚುನಾವಣೆಯ ಎರಡನೇ ಪಟ್ಟಿಯಲ್ಲಿ ನನಗೆ ಟಿಕೆಟ್ ಘೋಷಣೆ ಆಗದಿದ್ದಕ್ಕೆ ನಾನು ಪ್ರತಿಕ್ರಿಯಿಸಲ್ಲ. ಸದ್ಯ ಬೆಳಗಾವಿ ಕ್ಷೇತ್ರದ ಕುರಿತು ಚರ್ಚೆಗಳು ಆಗುತ್ತವೆ. ನಾಳೆ ಸಂಜೆಯೊಳಗೆ ಗೊತ್ತಾಗಲಿದೆ. ಅದಾದ ಬಳಿಕವೇ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಪಕ್ಷದ ವಿರುದ್ಧ ಜಗದೀಶ್ ಶೆಟ್ಟರ್ ಮತ್ತೆ ಅಸಮಾಧಾನ ಹೊರ ಹಾಕಿದ್ದಾರೆ.
ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯಿಂದ ಟಿಕೆಟ್ ಬೇಡ ಎಂದ ಬಳಿಕ ಜಗದೀಶ್ ಶೆಟ್ಟರ್ ಅವರು ಕೈಗೊಂಡ ನಿರ್ಧಾರ, ಕಾಂಗ್ರೆಸ್ ಸೇರ್ಪಡೆ,ಅಲ್ಲಿದ್ದುಕೊಂಡು ಬಿಜೆಪಿ ವಿರುದ್ಧದ ಮಾತುಗಳು, ಟಿಕೆಟ್ ಸಿಗುವ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಅವರ ನಿರ್ಧಾರಗಳು ಬಹುಶಃ ಅವರಿಗೇ ಮುಳುವಾದಂತಿವೆ. ಬೆಳಗಾವಿ ಕ್ಷೇತ್ರಕ್ಕೆ ತಮ್ಮ ಹೆಸರನ್ನು ಪರಗಣಿಸುವಂತೆ ಒತ್ತಡ ಹೇರಲು ಇಂದು ಅವರು ತಮ್ಮ ಸಹೋದರ ಪ್ರದೀಪ್ ಶೆಟ್ಟರ್ ಅವರ ಜೊತೆಗೆ ಬೆಂಗಳೂರು ಹೋಗುವ ನಿರೀಕ್ಷೆಗಳು ಇವೆ.
ಹುಬ್ಬಳ್ಳಿಯಲ್ಲಿ ಲೋಕಸಭಾ ಚುನಾವಣೆ ಟಿಕೆಟ್, ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಧಾರವಾಡ ಹಾಗೂ ಹಾವೇರಿ ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆಗಳಾಗಿದ್ದವು. ಈಗ ಟಿಕೆಟ್ ಘೋಷಣೆ ಆಗಿದೆ. ಈಗ ಬೆಳಗಾವಿ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇವತ್ತೆ ತೀರ್ಮಾನ ಆಗಲಿದೆ. ಈಗಲೇ ಯಾವ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಹೈಕಮಾಂಡ್ ನಿರ್ಧಾರದ ನಂತರ ನನ್ನ ನೀರ್ಣಯ ಪ್ರಕಟಿಸುತ್ತೇನೆ ಎಂದು ಅವರು ಹೇಳಿದರು.
ಟಿಕೆಟ್ ಸಿಗದಿದ್ದರೆ, ಜಗದೀಶ್ ಶೆಟ್ಟರ್ ಅವರು, ಬಂಡಾಯ ಏಳುವ, ಇಲ್ಲವೇ ಮುಕ್ತವಾಗಿ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆಗಳು ಇವೆ. ಈ ಹಿಂದಿನ ಚುನಾವಣೆಯಲ್ಲಿ ಟಿಕೆಟ್ ಬೇಡ ಎಂದಾಗಿ ಇಂತದ್ದೆ ಬೆಳವಣಿಗೆಗಳು ನಡೆದಿದ್ದವು.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾರು ಏನು ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಎಲ್ಲದ್ದಕ್ಕು ಜನರೇ ಉತ್ತರ ಕೊಡುತ್ತಾರೆ ಎನ್ನುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಅವರು ಸಿಡಿಮಿಡಿಗೊಂಡರು.
ಜಗದೀಶ್ ಶೆಟ್ಟರ್ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಲೇ ಏನೂ ಮಾತನಾಡುವುದಿಲ್ಲ. ಯಾವ ವೇದಿಕೆಯಲ್ಲಿ ಯಾರ ಮುಂದೆ ಹೇಳಬೇಕೋ ಆ ಸಂದರ್ಭದಲ್ಲಿ ತಿಳಿಸುತ್ತೇನೆ ಎಂದು ಹೇಳಿದರು.
ಬೆಳಗಾವಿ ಟಿಕೆಟ್ ಕುರಿತು ಅಲ್ಲಿಯ ನಾಯಕರ ಜೊತೆ ಚರ್ಚೆ ನಡೆಸುತ್ತಿದ್ದೇನೆ. ಹೈಕಮಾಂಡ್ ನಾಯಕರ ಜೊತೆಗೂ ಚರ್ಚೆ ನಡೆಸುತ್ತೇನೆ. ಹೈಕಮಾಂಡ್ ತೀರ್ಮಾಣಕ್ಕೆ ಅಂತಿಮವಾಗಿ ಬದ್ದವಾಗಿರುತ್ತೇನೆ. ಬೆಳಗಾವಿಯಲ್ಲಿ ಪರಿಸ್ಥಿತಿ ಸರಿ ಇಲ್ಲ ಎನ್ನುವುದು ಸುಳ್ಳು ಎಂದು ಬೆಳಗಾವಿ ಸ್ಪರ್ಧೆಗೆ ನಾಯಕರ ವಿರೋಧದ ಪ್ರಶ್ನೆಗೆ ಅವರು ಉತ್ತರಿಸಿದರು.
ಟಿಕೆಟ್ ಘೋಷಣೆಯ ಬಳಿಕ ರಾಜ್ಯದ ವರಿಷ್ಠರು, ರಾಜ್ಯಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರು ಮಾತನಾಡಿದ್ದಾರೆ. ಕೆಲವೊಂದನ್ನು ಬಹಿರಂಗವಾಗಿ ಹೇಳುವುದಕ್ಕೆ ಆಗುವುದಿಲ್ಲ ಎಂದು ತಿಳಿಸಿದರು.
ಲೋಕಸಭಾ ಟಿಕೆಟ್ ಘೋಷಣೆ ಬಳಿಕ ಶೆಟ್ಟರ್ ಪಶ್ಚಾತಾಪ ಪಡುತ್ತಾರೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನು ಯಾವ ಪಕ್ಷದಲ್ಲಿದ್ದರು ಸಂತೋಷವಾಗಿ ಇರುತ್ತೇನೆ. ಸದ್ಯ ಬಿಜೆಪಿಯಲ್ಲಿದ್ದು ಈಗಲೇ ಇಲ್ಲಿಯೂ ನಾನು ಸಂತೋಷವಾಗಿದ್ದೇನೆ. ನಾನು ಪಶ್ಚಾತ್ತಾಪ ಪಡುವಂತೆ ಮಾಡುವವನು ಎಂದು ತಿರುಗೇಟು ಕೊಟ್ಟರು.
ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್ ಹೆಸರು ಘೋಷಣೆಯಾಗದ ಹಿನ್ನೆಲೆ ಇಂದು ಹುಬ್ಬಳ್ಳಿ ಶೆಟ್ಟರ್ ನಿವಾಸದಲ್ಲಿ ಹಿತೈಷಿಗಳ ಸಭೆ ನಡೆಯಿತು. ಈ ವೇಳೆ ಪ್ರದೀಪ್ ಶೆಟ್ಟರ್, ನಾಗೇಶ್ ಕಲ್ಬುರ್ಗಿ, ಮಲ್ಲಿಕಾರ್ಜುನ ಸಾವುಕಾರ ಪಾಲ್ಗೊಂಡು ಹಲವು ವಿಷಯಗಳನ್ನು ಚರ್ಚಿಸಿದರು.ಟಿಕೆಟ್ ಘೋಷಣೆ ಆದರೆ ಏನು ಮಾಡಬೇಕು, ಒಂದು ವೇಳೆ ಟಿಕೆಟ್ ಸಿಗದ್ದಿರೆ ಮುಂದಿನ ನಡೆ ಏನು ಎಂಬುದರ ಕುರಿತು ಆಪ್ತರ ಜೊತೆ ಶೆಟ್ಟರ್ ಸಮಾಲೋಚನೆ ನಡೆಸಿದರು.ಶೆಟ್ಟರ್ ನಿರೀಕ್ಷೆ ಇಟ್ಟಿದ್ದ ಹಾವೇರಿ, ಧಾರವಾಡ ಕ್ಷೇತ್ರಗಳು ಬೇರೆಯವರ ಪಾಲಾಗಿವೆ. ಇದೀಗ ಕೊನೆಯದಾಗಿ ಉಳಿದಿರುವ ಬೆಳಗಾವಿ ಕ್ಷೇತ್ರವನ್ನು ಬಿಜೆಪಿ ನೀಡದಿದ್ದರೆ, ಅವರ ರಾಜಕೀಯ ಜೀವನ ಅಂತ್ಯವಾಗಲಿದೆ ಎನ್ನಲಾಗುತ್ತಿದೆ.