ಮ್ಮಸೂರು : ಹಳೇ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ರಾಷ್ಟ್ರೀಯ ನಾಯಕರಿಂದ ಸಮಾವೇಶ ಮತ್ತು ರೋಡ್ ಶೋ ನಡೆಸುವ ಮೂಲಕ ರಣತಂತ್ರ ರೂಪಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಎರಡು ದಿನ ಮಾತ್ರ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆ ಒಂದು ವಾರ ಮಾತ್ರ ಬಾಕಿ ಇದ್ದು, ಗೆಲುವಿಗಾಗಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ನಾಯಕರು ಮಾತ್ರವಲ್ಲದೆ, ಸಿನಿಮಾ ತಾರೆಯರು ಪ್ರಚಾರದ ಅಖಾಡದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರ ಕಿಚ್ಚ ಸುದೀಪ್ ಪ್ರಚಾರ ನಡೆಸುತ್ತಿದ್ದರೆ, ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಕೂಡ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ.
ರಾಜ್ಯದ ಹೈ-ವೋಲ್ಟೇಜ್ ಕ್ಷೇತ್ರವಾಗಿರುವ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪರವಾಗಿ ಗುರುವಾರ, ಮೇ 4ರಂದು ಸ್ಯಾಂಡಲ್‌ವುಡ್ ನಟರಾದ ಶಿವರಾಜಕುಮಾರ್, ದುನಿಯಾ ವಿಜಯ್ ಮತ್ತು ನಟಿ ರಮ್ಯಾ ಪ್ರಚಾರ ನಡೆಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕಾಗಿರುವ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹಾಗೂ ನಟ ದುನಿಯಾ ವಿಜಯ್ ಅವರು ಸಿದ್ದರಾಮಯ್ಯ ಪರ ಪ್ರಚಾರಕ್ಕಿಳಿಯುತ್ತಿದ್ದಾರೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.