ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರೂ.24,778 ಕೋಟಿ ಅನುದಾನ: ಸಿಎಂ 

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರೂ.24,778 ಕೋಟಿ ಅನುದಾನ: ಸಿಎಂ 

ಬೆಳಗಾವಿ: ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ 1990ರಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಯಿತು. 2013ರಲ್ಲಿ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು 371(ಜೆ) ಅಡಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿತು. ತದ ನಂತರ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು  ಕಲ್ಯಾಣ ಕರ್ನಾಟಕ ಪ್ರದೇಶಾಭಿüವೃದ್ಧಿ ಮಂಡಳಿ(ಕೆ.ಕೆ.ಆರ್.ಡಿ.ಬಿ)ಯಾಗಿ ಮರುನಾಮಕರಣ ಮಾಡಲಾಗಿದ್ದು, ಇದುವರೆಗೂ ರೂ.24,778 ಕೋಟಿ ಅನುದಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

371(ಜೆ) ತಿದ್ದುಪಡಿಯ ನಂತರ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಹೆಚ್.ಕೆ.ಪಾಟೀಲ್ ಅವರ ಅಧ್ಯಕ್ಷತೆಯ ಸಮಿತಿ ಮಾಡಿ ವರದಿ ಪಡೆಯಲಾಯಿತು. ಈ ವರದಿಯಲ್ಲಿ ಸೂಚಿಸಿದ ಮಾದರಿಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಎ ಹಾಗೂ ಬಿ ಗ್ರೂಪ್ ಹುದ್ದೆಗಳಲ್ಲಿ ಶೇ.75 ರಷ್ಟು, ಸಿ ಗ್ರೂಪ್ ಹುದ್ದೆಗಳಲ್ಲಿ ಶೇ.80 ಹಾಗೂ ಡಿ ಗ್ರೂಪ್ ಹುದ್ದೆಗಳಲ್ಲಿ ಶೇ.85 ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ ಶೇ.8 ರಷ್ಟು ಮೀಸಲಾತಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿಯನ್ನು  ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ ನೀಡಲಾಗಿದೆ.

ಇದರ ಪರಿಣಾಮವಾಗಿ ಇದುವರೆಗೂ ಈ ಭಾಗದ ವಿದ್ಯಾರ್ಥಿಗಳಿಗೆ 10,000 ವೈದ್ಯಕೀಯ, 31,000 ಇಂಜಿನಿಯರಿಂಗ್,  ಡೆಂಟಲ್ ಹೋಮಿಯೋಪತಿ ಸೇರಿದಂತೆ ಇತರೆ ವ್ಯಾಸಾಂಗಗಳಿಗೆ 12,000 ಸೀಟುಗಳು ಲಭ್ಯವಾಗಿವೆ. ಉನ್ನತ ವ್ಯಾಸಾಂಗದಲ್ಲಿ ಒಟ್ಟು 51,606 ವಿದ್ಯಾರ್ಥಿಗಳಿಗೆ ಲಾಭವಾಗಿದೆ. ರಾಜ್ಯ ಸರ್ಕಾರ 900 ಕೆ.ಪಿ.ಎಸ್ ಶಾಲೆಗಳನ್ನು ತೆರೆಯಲು ಅನುಮೊದನೆ ನೀಡಿದೆ. ಈ ಫೈಕಿ 300 ಶಾಲೆಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ತೆರೆಯಲಾಗುವುದು. ಇದರೊಂದಿಗೆ ಈ ಭಾಗದಲ್ಲಿ ಖಾಲಿಯಿರುವ 32,000 ಹುದ್ದೆಗಳ ಭರ್ತಿಗೂ ಅನುಮೋದನೆ ನೀಡಲಾಗಿದೆ ಎಂದರು.

ಡಾ.ನಂಜುಡಪ್ಪ ವರದಿಯ ಅನುಷ್ಠಾನದ ಕುರಿತು ಅಧ್ಯಯನ ನಡೆಸಲು ಆರ್ಥಿಕ ತಜ್ಞ ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಬರುವ ಜನವರಿಯಲ್ಲಿ ತನ್ನ ವರದಿ ನೀಡಲಿದೆ. ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಆರ್ಥಿಕ ತಜ್ಞೆ ಪ್ರೊ.ಛಾಯಾ ದೇವಣಗಾಂವ್‍ಕರ್ ಅವರ ಸಮಿತಿ 400 ಪುಟಗಳ ವರದಿ ನೀಡಿದೆ. ಈ ಎರಡು ವರದಿಗಳ ಶಿಫಾರಸ್ಸುಗಳನ್ನು ಯಥಾವತ್ತಾಗಿ ಸರ್ಕಾರ ಅನುಷ್ಠಾನಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.