ಬೆಳಗಾವಿ ಸುವರ್ಣಸೌಧ ಡಿ.19): ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಇದುವರೆಗೂ ರೂ.1,06,066 ಕೋಟಿ ಖರ್ಚು ಮಾಡಿದೆ. ಇದರಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ರೂ.46,277 ಕೋಟಿ ಹಣ ವ್ಯಯಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿಯ ವಿಧಾನಮಂಡಲದ ಅಧಿವೇಶನದ ವಿಧಾನ ಸಭೆ ಕಲಾಪಗಳಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ನಡೆದ ಚರ್ಚೆಗೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದರು.
ಸಾಮಾಜಿಕ ಹಾಗೂ ಅರ್ಥಿಕ ಅಸಮತೋಲನ ಸರಿಪಡಿಸುವ ಸಲುವಾಗಿಯೇ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ದಕ್ಷಿಣ ಭಾಗದಲ್ಲಿ ಶೇ.58 ರಷ್ಟು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಶೇ.42 ರಷ್ಟು ಜನಸಂಖ್ಯೆಯಿದೆ. ಆದರೆ ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಡಿ ಶೇ.43.63 ರಷ್ಟು ಹಣವನ್ನು ಉತ್ತರ ಕರ್ನಾಟಕ ಭಾಗಕ್ಕೆ ಖರ್ಚು ಮಾಡಿದೆ.
ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದಾದ್ಯಂತ 1,24,12,543 ಫಲಾನುಭವಿಗಳು ಇದ್ದಾರೆ. ಈ ಪೈಕಿ ಉತ್ತರ ಕರ್ನಾಟಕ ಭಾಗದಲ್ಲಿ 58,92,156 ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ರೂ.52,400 ಕೋಟಿ ಖರ್ಚು ಮಾಡಿದ್ದು, ಇದರಲ್ಲಿ ಉತ್ತರ ಕರ್ನಾಟಕ ಭಾಗದ ಫಲಾನುಭವಿಗಳ ಖಾತೆಗೆ ರೂ.24,631 ಕೋಟಿ ಜಮೆ ಮಾಡಿದೆ.
ಗೃಹಜ್ಯೋತಿ ಯೋಜನೆಯಡಿ ರಾಜ್ಯದ್ಯಂತ 1,65,24,547 ಮನೆಗಳಿಗೆ 200 ಯುನಿಟ್‍ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಪೈಕಿ ಉತ್ತರ ಕರ್ನಾಟಕ ಭಾಗದ 56,70,211 ಮನೆಗಳು ಉಚಿತ ವಿದ್ಯುತ್ ಪಡೆಯುತ್ತಿವೆ. ಇದಕ್ಕಾಗಿ ರಾಜ್ಯದ್ಯಂತ ರೂ.20,639 ಕೋಟಿ ವೆಚ್ಚ ಮಾಡಿದ್ದು ಈ ಪೈಕಿ ರೂ.6038 ಉತ್ತರ ಕರ್ನಾಟಕ ಭಾಗಕ್ಕೆ ಖರ್ಚಾಗಿದೆ.
ಯುವನಿಧಿ ಯೋಜನೆಯಡಿ ರಾಜ್ಯಾದ್ಯಂತ 2,84,802 ಕೋಟಿ ಫಲಾನುಭವಿಗಳಿದ್ದಾರೆ. ಈ ಪೈಕಿ ಉತ್ತರ ಕರ್ನಾಟಕದಲ್ಲಿ 1,73,722 ನಿರುದ್ಯೋಗಿ ಫಲಾನುಭವಿಗಳು ಯೋಜನೆಯಡಿ ಭತ್ಯೆ ಪಡೆಯುತ್ತಿದ್ದಾರೆ. ಯೋಜನೆಗೆ ರಾಜ್ಯದಲ್ಲಿ ರೂ.750 ಕೋಟಿ ಖರ್ಚಾಗಿದ್ದು, ರೂ.456 ಕೋಟಿಯನ್ನು ಉತ್ತರ ಕರ್ನಾಟಕ ಫಲಾನುಭವಿಗಳ ಖಾತೆ ಜಮೆ ಮಾಡಲಾಗಿದೆ. ಇದೇ ರೀತಿ ಅನ್ನಭಾಗ್ಯ ಯೋಜನೆಯಡಿ ಉತ್ತರ ಕರ್ನಾಟಕಕ್ಕೆ ರೂ.7848 ಕೋಟಿ, ಶಕ್ತಿ ಯೋಜನೆಯಡಿ ರೂ.7027 ಕೋಟಿ ವ್ಯಯಿಸಲಾಗಿದೆ ಎಂದರು.

























