ಬೆಳಗಾವಿ ಸುವರ್ಣ ವಿಧಾನಸೌಧ ಡಿ.10 : -ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2022-23 ರಿಂದ 2024-25ನೇ ಸಾಲಿನವರೆಗೆ ಒಟ್ಟು 13,728 ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ 945 ರೈತರಿಗೆ ವಿವಿಧ ಕಾರಣಗಳಿಂದ ಬೆಳೆ ವಿಮೆ ಪರಿಹಾರ ಜಮೆಯಾಗಿರುವುದಿಲ್ಲ. ಸಮಸ್ಯೆಗಳನ್ನು ಪರಿಹರಿಸಿ ಸರ್ಕಾರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದುರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಬುಧವಾರ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಬೆಳೆವಿಮೆ ಪರಿಹಾರ ಬಾಕಿ ಇರುವ 945 ರೈತರ ಪೈಕಿ ಎನ್.ಪಿ.ಸಿ.ಐ ಸೀಡಿಂಗ್, ಆಧಾರ್ ಕಾರ್ಡ್ ನಿಷ್ಕ್ರೀಯತೆ, ಅಮಾನ್ಯವಾದ ಬ್ಯಾಂಕ್ ಖಾತೆ ಸೇರಿದಂತೆ ತಾಂತ್ರಿಕ ಕಾರಣಗಳಿಂದಾಗಿ ಒಟ್ಟು 133 ರೈತರಿಗೆ ರೂ.40.09 ಲಕ್ಷ ಪರಿಹಾರ ಹಣ ಜಮೆಯಾಗದೆ ಹಿಂದಿರುಗಿದೆ. ಬೆಳೆÀ ಕಟಾವು ಇಳುವರಿ ಪ್ರಯೋಗ ವ್ಯತ್ಯಾಸದ ಹಿನ್ನಲೆಯಲ್ಲಿ 798 ಬೆಳೆ ಹೊಂದಾಣಿಕೆಯಾಗದೇ ಹಾಗೂ ಮಾರ್ಗಸೂಚಿಯನುಸಾರ ಬೆಳೆ ಕಟಾವು ಪ್ರಯೋಗಗಳ ಇಳುವರಿ ಲಭ್ಯವಿಲ್ಲದ ಕಾರಣ 14 ರೈತರಿಗೆ ಪರಿಹಾರ ಪಾವತಿ ಬಾಕಿಯಿದೆ. 2025-26ರ ಮುಂಗಾರು ಹಂಗಾಮಿನಲ್ಲಿ ಮಿಮೆ ಮಾಡಿಸುವ ರೈತರ ಸಂಖ್ಯೆ ಹೆಚ್ಚಾಗಿದ್ದು, ಕಲಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 10,054 ರೈತರು ನೋಂದಾಯಿಸಿಕೊಂಡಿದ್ದಾರೆ. ಮಧ್ಯಂತರ ಬೆಳೆ ವಿಮೆ ನಷ್ಟ ಪರಿಹಾರದಡಿ ಒಟ್ಟು 9861 ರೈತರಿಗೆ ರೂ.906.32 ಲಕ್ಷಗಳ ಬೆಳೆ ವಿಮೆ ಪರಿಹಾರ ಲೆಕ್ಕಾಚಾರ ಮಾಡಲಾಗಿದ್ದು, ವಿಮಾ ಸಂಸ್ಥೆಯವರಿಂದ ಪರಿಹಾರ ಇತ್ಯರ್ಥ ಪ್ರಕ್ರಿಯೆಯಲ್ಲಿದೆ. ಕಲಬುರಗಿ ಜಿಲ್ಲೆಗೆ ಮಧ್ಯಂತರ ಬೆಳೆ ವಿಮೆ ನಷ್ಟ ಪರಿಹಾರದಡಿ ರೂ.990 ಕೋಟಿ ಪರಿಹಾರವನ್ನು ನೀಡಲಾಗಿದೆ. ರಾಜ್ಯದ ಎಲ್ಲಾ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ರೈತರಿಗೆ ಬೆಳೆಮಿಮೆ ನೊಂದಣಿಗೆ ಪ್ರೋತ್ಸಾಹಿಸಬೇಕು. ಇದರಿಂದ ರೈತರಿಗೆ ಯಾವುದೇ ನಷ್ಟವಿಲ್ಲ. ವಿಮೆ ಮೊತ್ತ ಶೇ.2 ರಷ್ಟು ಮಾತ್ರ ರೈತರು ಪಾವತಿಸಬೇಕು. ಉಳಿದ ಬೆಳೆವಿಮೆ ಮೊತ್ತವನ್ನು ಸರ್ಕಾರ ಪಾವತಿಸುತ್ತದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರ ನೋಂದಣಿಯಿಂದ ಪ್ರಾರಂಭವಾಗಿ ಪರಿಹಾರ ವಿತರಣೆಯವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಸಂರಕ್ಷಣೆ ಪೋರ್ಟಲ್ ಮೂಲಕವೇ ನಿರ್ವಹಿಸಲಾಗುತ್ತದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
***




























