ಬೆಂಗಳೂರು (ಜ.19) : ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸುವುದರ ಜೊತೆಯಲ್ಲೇ, ವಿಜ್ಞಾನ ಅಧ್ಯಯನ ಹಾಗೂ ಸಂಶೋಧನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿಜ್ಞಾನ ಕೇಂದ್ರ ಹಾಗೂ ತಾರಾಲಯ ನಿರ್ಮಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಯೋಜನೆಗಳ ಅಡಿಯಲ್ಲಿ ನಾಳೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಆವರಣದಲ್ಲಿ ಬೆಳಗಾವಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಮಿನಿ ತಾರಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು *ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದ್ದಾರೆ.*
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಒಟ್ಟು 13 ಕೋಟಿಗಳ ಅಂದಾಜು ವೆಚ್ಚದಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಆವರಣದಲ್ಲಿ, ರಾಜಾಲಖಮಗೌಡ ಉದ್ಯಾನಕಾಶಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಮಿನಿ ತಾರಾಲಯದ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಕರ್ನಾಟಕ ನೀರಾವರಿ ನಿಗಮದಿಂದ ರಾಜಾಲಖಮಗೌಡ ಉದ್ಯಾನಕಾಶಿ ಅಭಿವೃದ್ಧಿ ಯೋಜನೆಯಡಿ 5.00 ಎಕರೆ ಜಮೀನನ್ನು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಸೊಸೈಟಿಗೆ ಕಾಮಗಾರಿ ಕೈಗೊಳ್ಳಲು ನೀಡಲಾಗಿದೆ. ಜಲಸಂಪನ್ಮೂಲ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಸಮಪಾಲಿನಲ್ಲಿ ಈ ಕೇಂದ್ರ ನಿರ್ಮಾಣವಾಗಲಿದೆ.
ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಒಂದು ಫನ್ ಸೈನ್ಸ್ ಗ್ಯಾಲರಿ ಹಾಗೂ ಎರಡು ಥೀಮ್ಯಾಟಿಕ್ ಸೈನ್ಸ್ ಗ್ಯಾಲರಿಯನ್ನು ಹೊಂದಿರಲಿದೆ. ಇದಲ್ಲದೇ 150 ಜನರು ಒಟ್ಟಿಗೆ ಕುಳಿತುಕೊಳ್ಳಬಹುದಾದ ಆಡಿಟೋರಿಯಮ್ ಕೂಡಾ ನಿರ್ಮಾಣವಾಗಲಿದೆ. ಕಂಪ್ಯೂಟರ್ ರೂಂ ಕೂಡಾ ಇರಲಿದ್ದು ವಿದ್ಯಾರ್ಥಿಗಳು ಹೊಸತನ್ನು ಕಲಿಯಲು ಅನುವು ಮಾಡಿಕೊಡಲಿದೆ. ಮಿನಿ ತಾರಾಲಯ 10 ಮೀಟರ್ ಡೋಮ್ ಹೊಂದಿರಲಿದ್ದು ಒಟ್ಟಿಗೆ 60 ಜನರು ಕುಳಿತು ಕೊಳ್ಳುವ ಸಾಮರ್ಥ್ಯವನ್ನು ಹೊಂದಿರಲಿದೆ. 2 ಅಥವಾ 3ಡಿ ಪ್ರೊಜೆಕ್ಟರ್ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಣಯಕೈಗೊಳ್ಳಲಾಗುವುದು.
ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಟ್ಟಡ ಕಾಮಗಾರಿಯನ್ನು ರೂ. 700.00 ಲಕ್ಷಗಳಲ್ಲಿ ಕೈಗೊಳ್ಳಲು ಹಾಗೂ ಮಿನಿ 3ಡಿ ತಾರಾಲಯದ ಕಟ್ಟಡ ಕಾಮಗಾರಿಯನ್ನು ರೂ. 330.60 ಲಕ್ಷಗಳಲ್ಲಿ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಪ್ರಾರಂಭಿಸಲು ಆದೇಶ ನೀಡಲಾಗಿದೆ. ಈ ನಿರ್ಮಾಣ ಕಾಮಗಾರಿಗೆ ನಾಳೆ (ಜನವರಿ 20) ಶಂಕುಸ್ಥಾಪನೆ ನೆರವೇರಲಿದೆ.
ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್, ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಲ. ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವರಾದ ಶ್ರೀಮತಿ ಲಕ್ಷ್ಮಿ ಆರ್. ಹೆಬ್ಬಾಳಕರ ಉಪಸ್ಥಿತರಿರಲಿದ್ದಾರೆ. ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನಿಖಿಲ್ ಉ. ಕತ್ತಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.