ಬೆಳಗಾವಿ, ಜುಲೈ 28: ಅತಿವೃಷ್ಟಿ ಹಾಗೂ ನದಿಯ ಹಿನ್ನೀರು ಮನೆಗಳಿಗೆ ನುಗ್ಗಿರುವ ಹಿನ್ನೆಲೆಯಲ್ಲಿ ಗೋಕಾಕ ನಗರದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಂಡಿರುವ ಕುಟುಂಬಸ್ಥರನ್ನು ಭಾನುವಾರ(ಜು.28) ಖುದ್ದಾಗಿ ಭೇಟಿ ಮಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಸಂತ್ರಸ್ತರಿಗೆ ಸಂಪೂರ್ಣ ನೆರವು ಕಲ್ಪಿಸುವ ಭರವಸೆ ನೀಡಿದರು.
ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಹಾಗೂ ಕೃಷ್ಣಾ, ಮಲಪ್ರಭಾ ಮತ್ತು ಘಟಪ್ರಭಾ ಸೇರಿದಂತೆ ಎಲ್ಲ ನದಿಗಳ ಒಳಹರಿವು ಹೆಚ್ಚಾದ ಪರಿಣಾಮ ನದಿಪಾತ್ರದ ಅನೇಕ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿರುತ್ತದೆ.
ಸುರಕ್ಷತಾ ದೃಷ್ಟಿಯಿಂದ ಗೋಕಾಕ, ಅಥಣಿ, ಕಾಗವಾಡ, ಚಿಕ್ಕೋಡಿ, ಮೂಡಲಗಿ ಹಾಗೂ ನಿಪ್ಪಾಣಿ ತಾಲ್ಲೂಕಿನ ನದಿತೀರದ ಗ್ರಾಮಸ್ಥರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿರುತ್ತದೆ.
ಕಾಳಜಿ ಕೇಂದ್ರಗಳಲ್ಲಿ ಕಲ್ಪಿಸಲಾಗಿರುವ ಊಟೋಪಹಾರ ಮತ್ತಿತರ ಮೂಲಸೌಕರ್ಯಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸ್ವತಃ ಗೋಕಾಕ ನಗರದ ಸರಕಾರಿ ಮುನ್ಸಿಪಲ್ ಪದವಿಪೂರ್ವ ಕಾಲೇಜಿನಲ್ಲಿ ಆರಂಭಿಸಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಸರಕಾರವು ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುತ್ತಿದ್ದು, ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು.
ಕಾಳಜಿ ಕೇಂದ್ರದಲ್ಲಿರುವ ಎಲ್ಲರಿಗೂ ಉತ್ತಮಗುಣಮಟ್ಟದ ಊಟೋಪಹಾರ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಕೂಡ ಒದಗಿಸಲಾಗಿರುತ್ತದೆ.
ನದಿತೀರದ ಕೆಲವು ಗ್ರಾಮಸ್ಥರು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳಲು ನಿರಾಕರಿಸುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಪ್ರತಿಯೊಬ್ಬರ ಜೀವ ಅಮೂಲ್ಯವಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರ ಅಥವಾ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಮನವಿ ಮಾಡಿಕೊಂಡರು.
ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದ ತುಂಬು ಗರ್ಭಿಣಿಯೊಬ್ಬರನ್ನು ಮಾತನಾಡಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದರು.
ಕಾಳಜಿ ಕೇಂದ್ರದಲ್ಲಿ ಸಮಯಕ್ಕೆ ಸರಿಯಾಗಿ ಊಟೋಪಹಾರ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಹಶೀಲ್ದಾರರಿಗೆ ಸೂಚನೆ ನೀಡಿದರು. ಇದಲ್ಲದೇ ಪ್ರತಿಯೊಂದು ತಾಲ್ಲೂಕುಗಳಿಗೆ ನಿಯೋಜಿಸಲಾಗಿರುವ ನೋಡಲ್ ಅಧಿಕಾರಿಗಳು ಕೂಡ ಪ್ರತಿದಿನ ತಮ್ಮ ವ್ಯಾಪ್ತಿಯ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಸಂತ್ರಸ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಇದಾದ ಬಳಿಕ ಗೊಡಚಿನಮಲ್ಕಿ ಜಲಪಾತ ಪ್ರದೇಶವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ನೀರಿನಹರಿವು ಹೆಚ್ಚಾಗಿರುವುದರಿಂದ ಅಗತ್ಯ ಎಚ್ಚರಿಕೆ ವಹಿಸುವಂತೆ ಪೊಲೀಸ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗೆ ನಿರ್ದೇಶನ ನೀಡಿದರು.
ಗೋಕಾಕ ತಹಶೀಲ್ದಾರ ಮೋಹನ ಭಸ್ಮೆ, ನೋಡಲ್ ಅಧಿಕಾರಿ ಬಸವರಾಜ ಕುರಿಹುಲಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಹಾಯವಾಣಿಗೆ ಕರೆ ಮಾಡಲು ಮನವಿ:
ನದಿತೀರದ ಗ್ರಾಮಸ್ಥರು ಪ್ರವಾಹದಿಂದ ಯಾವುದೇ ರೀತಿಯ ತೊಂದರೆ ಅಥವಾ ಅಪಾಯಕ್ಕೆ ಸಿಲುಕಿದರೆ ತಕ್ಷಣವೇ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
* ಪ್ರವಾಹ ಸಹಾಯವಾಣಿ ಸಂಖ್ಯೆಗಳು-0831-2407290
* ಪೊಲೀಸ್ ಸಹಾಯವಾಣಿ-0831-2474054
* ತುರ್ತು ಸಹಾಯಕ್ಕಾಗಿ -112
****