- ಮಕ್ಕಳ ಮಾರಾಟ ಗ್ಯಾಂಗನಿಂದ ರಕ್ಷಣೆಗೊಳಗಿದ್ದ ಹಸುಳೆ ಶುಕ್ರವಾರ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇಲ್ಲಿನ ಸದಾಶಿವನಗರದ ರುದ್ರಭೂಮಿಯ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಲಾಗಿದೆ.
ಹೆಣ್ಣು ಮಗು ಮಾರಾಟ ಮಾಡುತ್ತಿದ್ದ ಸಮಯದಲ್ಲಿ ಪೊಲೀಸರು ಮಾರಾಟ ಮಾಡುತ್ತಿದ್ದವರು ಸೇರಿದಂತೆ ಮಗು ಜನನಕ್ಕೆ ಕಾರಣವಾಗಿರುವ ತಂದೆ, ತಾಯಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. 30 ದಿನದ ಹಸೂಳೆಯನ್ನು ಸಂರಕ್ಷಣೆ ಮಾಡಿ, ನಗರದ ಜಿಲ್ಲಾಸ್ಪತ್ರೆಯಲ್ಲಿ ಆರೈಕೆಗಾಗಿ ಇಡಿಸಲಾಗಿತ್ತು. ಮಗುವಿನ ತೂಕದಲ್ಲಿ ಹೆಚ್ಚಳ ಆಗದಿರುವುದು ಸೇರಿದಂತೆ ಬೆಳವಣಿಗೆಯಲ್ಲಿ ಕುಂಠಿತವಾಗಿ ಅಸುನಿಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದುಕೊಂಡು ಜೈಲಿನಲ್ಲಿದ್ದ ಮಗುವಿನ ತಂದೆ ತಾಯಿಯನ್ನು ಕರೆದುಕೊಂಡು ಬಂದಿದ್ದಾರೆ. ಬಳಿಕ ಇಲ್ಲಿನ ಸದಾಶಿವನಗರದಲ್ಲಿರುವ ರುದ್ರಭೂಮಿಯಲ್ಲಿ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಲಾಗಿದೆ. ಅಂತ್ಯಸಂಸ್ಕಾರಕ್ಕೆ ಅಗತ್ಯ ಸಾಮಗ್ರಿಗಳನ್ನು ಪೊಲೀಸರು ಸ್ವಂತ ಹಣದಲ್ಲೇ ಕೊಡಿಸಿ ಮಗುವಿನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ಮಮ್ಮಲ ಮರುಕಪಡುವುದರ ಜತೆಗೆ ಭಾವುಕಾರದರು. ಮಗುವಿನ ಮೃತದೇಹವನ್ನು ಕಂಡ ತಂದೆ, ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಅಂತ್ಯಸಂಸ್ಕಾರ ಕಾರ್ಯ ಮುಗಿದ ಬಳಿಕ ಆರೋಪಿ ತಂದೆ, ತಾಯಿಯನ್ನು ಮರಳಿ ಜೈಲಿಗೆ ಕಳುಹಿಸಿದ್ದಾರೆ.
ಮದುವೆಗೂ ಮುಂಚೆ ದೈಹಿಕ ಸಂಪರ್ಕದಿಂದ ಜನಿಸಿದ ಮಗುವನ್ನು ಅಭಾಷನ ಮಾಡಲು ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿರುವ ಖಾಸಗಿ ಆಸ್ಪತ್ರೆಗೆ ತೆರಳಿದ್ದ ಸಮಯದಲ್ಲಿ ನಕಲಿ ವೈದ್ಯ ಅಬ್ದುಲ್‌ಗಫಾರ ಹುಸೇನಸಾಬ ಲಾಡಖಾನ ಆರೋಪಿಗಳಿಂದ 20 ಸಾವಿರ ಹಣ ಪಡೆದು 7 ತಿಂಗಳ ಮಗುವನ್ನು ಹೊರತೆಗೆದಿದ್ದನು. ಬಳಿಕ ಹಸುಳೆಯನ್ನು ನಕಲಿ ವೈದ್ಯ ಸಂರಕ್ಷಣೆ ಮಾಡಿದ್ದನು. ಕೇವಲ 30 ದಿನದ ಹೆಣ್ಣು ಮಗುವನ್ನು ಡಾ.ಅಬ್ದುಲ್‌ಗಫಾರ ಲಾಡಖಾನ ಎಂಬುವನಿಗೆ ಮಹಾದೇವಿ ಅಲಿಯಾಸ್ ಪ್ರಿಯಾಂಕಾ ಜೈನರ್ ₹ 60 ಸಾವಿರ ಹಣ ಕೊಟ್ಟು ಖರೀದಿಸಿ,ಬೆಳಗಾವಿ ನಗರದಲ್ಲಿ ಮಾರಾಟ ಮಾಡಲು ಮುಂದಾಗಿದ್ದಾಳೆ. ಹೆಣ್ಣು ಮಗುವ ಮಾರಾಟ ದಂಧೆಯ ಮಾಹಿತಿ ಪಡೆದ ರಾಮತೀರ್ಥ ನಗರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ದತ್ತು ಕೇಂದ್ರದ ಸಂಯೋಜಕರು ಈ ಕುರಿತು ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ರಹಸ್ಯ ಕಾರ್ಯಾಚರಣೆ ಮಾಡಿ, ನಾವೇ ₹ 1ಲಕ್ಷ 40 ಸಾವಿರಕ್ಕೆ ಈ ಹೆಣ್ಣು ಮಗುವನ್ನು ಖರೀದಿಸುವುದಾಗಿ ಹೇಳಿ ನಂಬಿಸಿದ್ದಾರೆ. ಈ ಮಾತನ್ನು ನಂಬಿದ ಮಹಾದೇವಿ ಅಲಿಯಾಸ್ ಪ್ರಿಯಾಂಕಾ ಜೈನರ್ ಮಗುವನ್ನು ಮಾರಾಟ ಮಾಡಲು ಬಂದ ಸಮಯದಲ್ಲಿ ಪೊಲೀಸರು ದಾಳಿ ನಡೆಸಿ ಆಕೆಯನ್ನು ವಶಕ್ಕೆ ಪಡೆದುಕೊಂಡು ಮಗುವಿನ ತಂದೆ, ತಾಯಿಯನ್ನು ಜೈಲಿಗೆ ಕಳುಹಿಸಿದ್ದರು.