ಬೆಳಗಾವಿ : ಹಾಸನದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯ ಮಾಡಿರುವ ಪ್ರಕರಣ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿದಿದ್ದರೂ ಹಾಸನ ಟಿಕೆಟ್ ನೀಡಿದ್ದು ದುರ್ದೈವದ ಸಂಗತಿ ಎಂದು ಎಐಸಿಸಿ ರಾಷ್ಟ್ರೀಯ ಕಾಂಗ್ರೆಸ್ ವಕ್ತಾರೆ ಸುಪ್ರೀಯಾ ಶ್ರೀನೆಟ್ ವಾಗ್ದಾಳಿ ನಡೆಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿ ಅವರಿಗೆ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವ ಮಾಹಿತಿ ಇತ್ತು. ಆದರೆ ಅವರಿಗೆ ಹಾಸನ ಟಿಕೆಟ್ ಕೊಟ್ಟು ಮೈಸೂರಿನಲ್ಲಿ ಬಿಜೆಪಿ ನಡೆಸಿದ ಸಮಾವೇಶದಲ್ಲಿ ಪ್ರಜ್ವಲ್ ರೇವಣ್ಣನ ಬೆನ್ನು ತಟ್ಟಿ ಮತ ನೀಡುವಂತೆ ಯಾವ ಮುಖ ಇಟ್ಟುಕೊಂಡು ಮತಯಾಚನೆ ಮಾಡಿದರು ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿರುವವರ ಪರವಾಗಿ ನಿಲ್ಲುತ್ತಾರೆ. ಆದರೆ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. ಪ್ರಜ್ವಲ್ ರೇವಣ್ಣನ ಪ್ರಕರಣದ ಕುರಿತು ಯಾವ ಕೇಂದ್ರ ಸಚಿವರು ಮಾತನಾಡದೆ ಇರುವುದು ವಿಪರ್ಯಾಸದ ಸಂಗತಿ ಎಂದರು.
ಹಾಸನ ಜಿಲ್ಲೆಯ ಜೆಡಿಎಸ್ ಶಾಸಕರಾದ ದೇವರಾಜ್ ಗೌಡ, ಕಳೆದ ಡಿಸೆಂಬರ್ ನಲ್ಲೇ ಈ ವಿಷಯವನ್ನು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ಗಮನಕ್ಕೆ ತಂದು, ಹಲವು ದಾಖಲೆಗಳನ್ನೂ ನೀಡಿ ಪ್ರಜ್ವಲ್ ಗೆ ಟಿಕೆಟ್ ನೀಡಬಾರದೆಂದು ವಿನಂತಿಸಿದ್ದರು ಎಂದು ತಿಳಿಸಿದರು.
ಪ್ರಜ್ವಲ್ ನ ವಿಡಿಯೋಗಳು ಈಗಿನದಲ್ಲ, ನಾಲ್ಕು ವರುಷಗಳ ಹಿಂದಿನದು ಎಂದು ಅವರ ತಂದೆ ರೇವಣ್ಣ ಹೇಳಿದಕ್ಕೆ ಪ್ರತಿಕ್ರಿಯಿಸಿದ ಅವರು ಯಾವಾಗಲೇ ಮಾಡಿದ್ದರು ಅದು ತಪ್ಪೇ. ಅಕ್ಷಮ್ ಅಪರಾಧ. ವಿಡಿಯೋ ಬಿಡುಗಡೆಯಿಂದ ಸಾವಿರಾರು ಮಹಿಳೆಯರ ಬದುಕು ಆತಂಕಕ್ಕೋಳಗಾಗಿದೆ. ನಿಜವಾಗಿಯೂ ಆತಂಕಗೋಳಗಾಗಬೇಕಾದವನು ಪ್ರಜ್ವಲ್ ಮತ್ತು ಅವರ ತಂದೆ. ಅಪ್ಪ, ಮಗ ಇಬ್ಬರೂ 16 ವರುಷದ ಬಾಲಕಿ ಸೇರಿದಂತೆ 63- ವರುಷದ ಮಹಿಳೆಯವರೆಗೂ ಬಿಟ್ಟಿಲ್ಲ. ಅವರ ಮೋಸಕ್ಕೆ ದೌರ್ಜನ್ಯಕ್ಕೋಳಗಾದ ಯಾವ ಮಹಿಳೆಯರು ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಅವರು ವಿನಂತಿ ಮಾಡಿಕೊಂಡರು.