ಬೆಂಗಳೂರು:2 ಕೋಟಿ ನಗದು ಜಪ್ತಿ ಪ್ರಕರಣ: ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು ಸೇರಿ ಇಬ್ಬರ ವಿರುದ್ಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ನಗರದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸುತ್ತಿದ್ದ 2 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿರುವ ಚುನಾವಣಾ ಅಕ್ರಮ ತಡೆ ತಂಡ, ಈ ಸಂಬಂಧ ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು ಮತ್ತು ಇತರೆ ಇಬ್ಬರ ವಿರುದ್ಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದೆ.
ಕಾಟನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ತನಿಖಾ ಠಾಣೆಯಲ್ಲಿ ಶನಿವಾರ ಸಂಜೆ ಕಾರು ತಪಾಸಣೆ ನಡೆಸಿದಾಗ ರೂ. 2 ಕೋಟಿ ನಗದು ಪತ್ತೆಯಾಗಿತ್ತು. ಅದು ಬಿಜೆಪಿ ರಾಜ್ಯ ಘಟಕದ ಕಚೇರಿಗೆ ಸೇರಿದ್ದು ಎಂಬುದಾಗಿ ಕಾರಿನಲ್ಲಿದ್ದವರು ದಾಖಲೆ ಒದಗಿಸಿದ್ದರು. ಬಳಿಕ ಚುನಾವಣಾಧಿಕಾರಿಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ನಗದನ್ನು ನೀಡಿ, ಸೂಕ್ತ ಕ್ರಮ ಜರುಗಿಸುವಂತೆ ಕೋರಿದ್ದರು.
ಹಣವನ್ನು ಬ್ಯಾಂಕ್ನಿಂದ ನಗದೀಕರಿಸಿರುವ ದಾಖಲೆಗಳಿರುವ ಕಾರಣದಿಂದ ಆದಾಯ ತೆರಿಗೆ (ಐ.ಟಿ) ಕಾಯ್ದೆಯ ಉಲ್ಲಂಘನೆ ಆಗಿಲ್ಲ ಎಂದು ಐ.ಟಿ ಅಧಿಕಾರಿಗಳು ಚುನಾವಣಾಧಿಕಾರಿಗಳಿಗೆ ತಿಳಿಸಿದ್ದರು. ನಗದನ್ನೂ ವಾಪಸ್ ಚುನಾವಣಾಧಿಕಾರಿಗಳ ವಶಕ್ಕೆ ಮರಳಿಸಿದ್ದರು. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಗಳನ್ನು ಉಲ್ಲಂಘಿಸಿ ನಗದು ಸಾಗಿಸುತ್ತಿದ್ದ ಆರೋಪದ ಮೇಲೆ ಇದೀಗ ನ್ಯಾಯಾಲಯದ ಅನುಮತಿ ಪಡೆದು ಎಫ್ಐಆರ್ ದಾಖಲಿಸಿದ್ದಾರೆ.