ಬೆಂಗಳೂರು, ಮಾ 19:ದು ಪಕ್ಷದ ಪದಾಧಿಕಾರಿಗಳು ಆರೋಪಿಸಿದ್ದಾರೆ. ಜೊತೆಗೆ ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ನೀಡದಿರಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ ಲೋಕಸಭಾ ಚುನಾವಣೆಗೂ ಮೊದಲೇ ಬಿಜೆಪಿ ಮತ್ತು ಜೆಡಿಎಸ್ ನಡುವೆ ಅಸಮಾಧಾನ ಭುಗಿಲೆದ್ದಿದೆ. ಬಿಜೆಪಿ ಈಗಾಗಲೇ ಕರ್ನಾಟಕದ ಇಪ್ಪತ್ತು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಇದಕ್ಕೆ ಜಾತ್ಯಾತೀತ ಜನತಾ ದಳ (ಜೆಡಿಎಸ್)ನ ಚುನಾವಣಾ ಉಸ್ತುವಾರಿ, ಸಹ-ಪ್ರಭಾರಿಗಳು ಮತ್ತು ಕೋರ್ ಕಮಿಟಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಪಕ್ಷವಾಗಿರುವ ತಮ್ಮನ್ನು ಅಭ್ಯರ್ಥಿಗಳ ಘೋಷಣೆಯಾದಾಗ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಪಕ್ಷದ ಪದಾಧಿಕಾರಿಗಳು ಆರೋಪಿಸಿದ್ದಾರೆ. ಜೊತೆಗೆ ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ನೀಡದಿರಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡರು ಸಭೆಯಲ್ಲಿ ಹೇಳಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಕೋರ್ ಕಮಿಟಿ ಸದಸ್ಯರು ಹಾಗೂ ಚುನಾವಣಾ ಉಸ್ತುವಾರಿಗಳು, ಸಹ ಉಸ್ತುವಾರಿಗಳ ಸಭೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಮುಖಂಡರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಒಕ್ಕೊರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದ ಮುಖಂಡರು, ಬಿಜೆಪಿ ಮೊದಲಿನಿಂದಲೂ ನಮ್ಮನ್ನು ಹಾಗೂ ನಮ್ಮ ಪಕ್ಷವನ್ನು ನಿರ್ಲಕ್ಷಿಸುತ್ತಿದೆ. ಬಿಜೆಪಿ ನಮ್ಮನ್ನು ಬಿಟ್ಟು ಚುನಾವಣೆಗೆ ಹೋಗುತ್ತಿದೆ, ನಿರ್ಲಕ್ಷ್ಯ ವಹಿಸುತ್ತಿರುವುದು ಚುನಾವಣಾ ಸಭೆ ಮತ್ತು ಪ್ರಚಾರದಲ್ಲಿ ಕಾಣುಸುತ್ತುದೆ. ಬಿಜೆಪಿಯವರು ನಮ್ಮನ್ನು ಯಾವುದೇ ಸಭೆಗೆ ಕರೆಯುತ್ತಿಲ್ಲ. ಬಿಜೆಪಿ ಇಪ್ಪತ್ತು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಜೆಡಿಎಸ್ ವರಿಷ್ಠರನ್ನು ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಜೆಡಿಎಸ್ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
“ಚುನಾವಣಾ ಕಾರ್ಯತಂತ್ರ ರೂಪಿಸುವ ಸಭೆಗಳಿಗೆ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಆಹ್ವಾನಿಸಬೇಕಲ್ಲವೇ..? ಕಲಬುರಗಿ ಸಭೆಗೂ ಜೆಡಿಎಸ್ ಸ್ಥಳೀಯ ಮುಖಂಡರನ್ನು ಕರೆಯಲಿಲ್ಲ, ಅವರೇ ಮಾಡಿದ್ದಾರೆ. ಹೈದರಾಬಾದ್-ಕರ್ನಾಟಕದ ಜೆಡಿಎಸ್ ಶಾಸಕರು ಮತ್ತು ಮಾಜಿ ಶಾಸಕರಿಗೂ ಈ ಬಗ್ಗೆ ಮಾಹಿತಿ ನೀಡಿಲ್ಲ. ಶಿವಮೊಗ್ಗ ಸಭೆಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಕರೆಯಬಹುದಿತ್ತು. ನಮ್ಮ ಪಕ್ಷವನ್ನು ಒತ್ತೆ ಇಟ್ಟು ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ. ನಮಗೆ ಮೋದಿ ಬಗ್ಗೆ ಅಪಾರ ಗೌರವವಿದೆ. ಅದರಲ್ಲಿ ಎರಡನೇ ಮಾತಿಲ್ಲ. ಇಂತಹ ವರ್ತನೆ ಬಿಜೆಪಿಯಿಂದ ನಿರೀಕ್ಷಿಸಿರಲಿಲ್ಲ” ಎಂದು ಪಕ್ಷದ ನಾಯಕರು ಬೇಸರ ಹೊರಹಾಕಿದ್ದಾರೆ.
“ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಸೋಲುವ ಲೆಕ್ಕಾಚಾರದಲ್ಲಿದೆ. ಕೇವಲ ಎರಡು ಸ್ಥಾನಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕಿತ್ತೇ? ಇಂತಹ ಅನಿಶ್ಚಿತತೆಯಿಂದ ಪಕ್ಷಕ್ಕೆ ನಷ್ಟವಾಗುತ್ತದೆ. ಕೋಲಾರ ಜೆಡಿಎಸ್ ಕ್ಷೇತ್ರ ಎಂದು ಮೊದಲಿನಿಂದಲೂ ಹೇಳುತ್ತಿದ್ದೀರಿ. ಕೋಲಾರ, ಹಾಸನ, ಮಂಡ್ಯ ಸೇರಿದಂತೆ 5 ಕ್ಷೇತ್ರಗಳು ಜೆಡಿಎಸ್ ಗೆ ಬರುತ್ತವೆ ಎಂದು ಹೇಳಿದ್ದೀರಿ. ಆದರೆ, ಬಿಜೆಪಿ 2 ಸ್ಥಾನಕ್ಕೆ ಬಂದಿದೆ” ಎಂದು ಪಕ್ಷದ ಉಸ್ತುವಾರಿಗಳು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರು ಪಕ್ಷದ ನಾಯಕರ ಮಾತುಗಳನ್ನು ಶಾಂತವಾಗಿ ಆಲಿಸಿ ಅತೃಪ್ತ ನಾಯಕರಿಗೆ ಸಾಂತ್ವನ ಹೇಳಿದ್ದಾರೆ. ಮತ್ತೊಮ್ಮೆ ಅಮಿತ್ ಶಾ, ನಡ್ಡಾ ಜೊತೆ ಮಾತನಾಡಿ, ಇಲ್ಲದಿದ್ದರೆ ತಾವೇ ದೆಹಲಿಗೆ ಹೋಗಿ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿಗೆ ಎಚ್.ಡಿ.ದೇವೇಗೌಡ ಸೂಚನೆ ನೀಡಿದ್ದಾರೆ.
ಕೋಲಾರ ಕ್ಷೇತ್ರಕ್ಕೆ ಉತ್ತಮ ನಿರ್ಧಾರ ಕೈಗೊಳ್ಳೋಣ ಎಂದು ಅಮಿತ್ ಶಾ ಅವರೇ ಹೇಳಿದ್ದಾರೆ. ಇದು ಬಿಜೆಪಿ ನಾಯಕರಿಗೂ ಗೊತ್ತಿದೆ. ಯಾವುದೇ ಕಾರಣಕ್ಕೂ ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಕ್ರಮ ಕೈಗೊಳ್ಳುವುದಿಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸಭೆಯಲ್ಲಿ ತಿಳಿಸಿದ್ದಾರೆ