ಬೆಂಗಳೂರು, ಮಾ 5:ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ವಿಧಾನಸಭಾ ಚುಣಾವಣೆಯಲ್ಲಿ ಗೆಲುವು ಕಂಡ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ತಯಾರಿ ನಡೆಸಿದೆ. ಮುಂಬರುವ ಲೊಕಸಭಾ ಚುನಾವಣೆಯಲ್ಲಿ ನಮ್ಮ ಕೈ ಗಟ್ಟಿ ಮಾಡಬೇಕು. ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಯಾವುದೇ ಪಕ್ಷಗಳು ತೆಗೆದು ಹಾಕಲು ಸಾಧ್ಯವಿಲ್ಲ. ಇಂದಿರಾಗಾಂಧಿ ಅವರ ಕಾಲದಲ್ಲಿ ಬಡವರಿಗೆ ಭೂಮಿ ನೀಡುವ, ಅರಸು ಅವರ ಕಾಲದಲ್ಲಿ ಜನತಾ ಮನೆಗಳು ನೀಡುವ ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಯಾವ ಪಕ್ಷಗಳು ನೀಡಲು ಸಾಧ್ಯವಿಲ್ಲ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳ ಜನ ಅಧಿಕಾರಕ್ಕೆ ಬಂದಂತೆ.
ಪಕ್ಷ ಬೇಧ, ಜಾತಿ ಬೇಧ ಮರೆತು ಎಲ್ಲರಿಗೂ ಅನುಕೂಲವಾಗಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ತೀರ್ಥಹಳ್ಳಿಯ ಶಾಸಕ ಅರಗ ಜ್ಞಾನೇಂದ್ರ ಅವರು ಗ್ಯಾರಂಟಿ ಯೋಜನೆಗಳನ್ನು 420 ಯೋಜನೆ ಎಂದು ಕರೆದರು. ಬಿಜೆಪಿ ನಾಯಕರಲ್ಲೇ ಗ್ಯಾರಂಟಿ ಯೋಜನೆಗಳ ಬಗ್ಗೆ ದ್ವಂದ್ವವಿದೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ ‘ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಸದೃಡವಾಗಿದೆ’ ಎಂದು ಹೇಳಿದ್ದಾರೆ.
ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಹೊರತು ಭಾವನೆಗಳ ಮೇಲೆ ರಾಜಕಾರಣ ಮಾಡುವುದಿಲ್ಲ. ನಮ್ಮ ರಾಜಕರಣದಲ್ಲಿ ಧರ್ಮವಿದೆ ಹೊರತು. ಧರ್ಮದಲ್ಲಿ ರಾಜಕಾರಣವಿಲ್ಲ. ನಮಗೂ ಅವರಿಗೂ ಇರುವ ವ್ಯತ್ಯಾಸ ಇಷ್ಟೇ. ನಾವು ತಂದಿರುವ ಗ್ಯಾರಂಟಿ ಯೋಜನೆಗಳು ಎಲ್ಲಾ ಜಾತಿ, ಧರ್ಮಗಳಿಗೆ ಅನುಕೂಲ ಮಾಡಿಕೊಟ್ಟಿವೆ. ನಾವು ಜಾತಿ ಮೇಲೆರಾಜಕಾರಣ ಮಾಡುವುದಿಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತೇವೆ.
ನಾವು ಬಡತನದ ಮೇಲೆ ಯುದ್ದ ಮಾಡುತ್ತೇವೆ ಹೊರತು, ಬಡವರ ಮೇಲೆ ಯುದ್ದ ಮಾಡುವುದಿಲ್ಲ. ಕಮಲ ಕೆರೆಯಲ್ಲಿ ಇದ್ದರೆ ಚೆನ್ನ, ಈ ಧಾನ, ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆನ್ನ. ನಿಮ್ಮ ಭೂಮಿಗಳನ್ನು ಮಾರಿಕೊಳ್ಳಬೇಡಿ. ಪೆರಿಫೆರಲ್ ವರ್ತುಲ ರಸ್ತೆ ಬರುತ್ತಿದೆ. ಇನ್ನೂ ಅನೇಕ ಬಡಾವಣೆಗಳು ಬೆಳೆಯುತ್ತಿವೆ. ಸರ್ಕಾರದಿಂದ ಶೇ 40 ರಷ್ಟು ನಿವೇಶನ ಹಂಚಿಕೆ ಮಾಡಿದರೂ ಕೋಟ್ಯಂತರ ರೂಪಾಯಿ ಹಣ ನಿಮ್ಮದಾಗಲಿದೆ. ಚಿಲ್ಲರೆ ಹಣಗಳಿಗೆ ಜಮೀನು ಮಾರಲು ಹೋಗಬೇಡಿ. ನಿಮ್ಮ ಆರೋಗ್ಯ, ಶಿಕ್ಷಣ, ಉದ್ಯೋಗಕ್ಕೆ ಬೇಕಾದ ಎಲ್ಲಾ ಯೋಜನೆಗಳನ್ನು ನಾವು ರೂಪಿಸಿ ಕೊಡುತ್ತೇವೆ.