ಬೆಂಗಳೂರು: ನಿಗಮ ಮಂಡಳಿ ನೇಮಕ ವಿಚಾರ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಲವು ಸುತ್ತುಗಳ ಸಮಾಲೋಚನೆ, ಸಭೆಗಳ ಬಳಿಕವೂ ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗುತ್ತಿಲ್ಲ.
ಇದೀಗ ನಿಗಮ ಮಂಡಳಿ ನೇಮಕ ವಿಚಾರ ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಹೈಕಮಾಂಡ್ ನಡುವಣ ಸಂಘರ್ಷವಾಗಿ ಮಾರ್ಪಟ್ಟಿದೆ. ಹೈಕಮಾಂಡ್ ಕಳುಹಿಸಿರುವ ಪಟ್ಟಿಯಲ್ಲಿ ಕೆಲವು ಅಚ್ಚರಿಯ ಹೆಸರುಗಳು ಕಾಣಿಸಿವೆ ಎನ್ನಲಾಗಿದ್ದು, ಇದನ್ನು ಅಂತಿಮಗೊಳಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಮ್ಮತಿಸುತ್ತಿಲ್ಲ. ಈ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ಮಾತುಕತೆಯನ್ನೂ ನಡೆಸಿದ್ದಾರೆ.
ನಿಗಮ ಮಂಡಳಿ ಕುರಿತು ಮತ್ತೆ ಚರ್ಚಿಸಲು ರಣದೀಪ್ ಸುರ್ಜೇವಾಲ ಬೆಂಗಳೂರಿಗೆ ಬರಲಿದ್ದು, ಜನವರಿ 26ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಅದೇ ದಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಹೀಗಾಗಿ ಖರ್ಗೆ ಉಪಸ್ಥಿತಿಯಲ್ಲೇ ಮತ್ತೊಂದು ಸುತ್ತಿನ ಚರ್ಚೆ ನಡೆಯುವ ಸಾಧ್ಯತೆ ಇದೆ.