This is the title of the web page
This is the title of the web page

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಶೌರ್ಯಭೂಮಿ(ಶಿಲ್ಪವನ) ಲೋಕಾರ್ಪಣೆ

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಶೌರ್ಯಭೂಮಿ(ಶಿಲ್ಪವನ) ಲೋಕಾರ್ಪಣೆ

ಬೆಳಗಾವಿ, ಜ.17 : ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ ವಿಶಾಲವಾದ ಜಾಗೆಯಲ್ಲಿ ನಿರ್ಮಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಹಾಗೂ ರಾಯಣ್ಣನ ಕೆಚ್ಚೆದೆಯ ಬದುಕು ಅನಾವರಣಗೊಳಿಸುವ ಆಕರ್ಷಕ ಶಿಲ್ಪವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ(ಜ.17) ಲೋಕಾರ್ಪಣೆಗೊಳಿಸಿದರು.

ಬೆಳಗಾವಿ ಜಿಲ್ಲಾಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶ್ರೀ ಕ್ಷೇತ್ರ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ, ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಸಂಗೊಳ್ಳಿ ಹಿರೇಮಠದ ಗುರು ಸಿದ್ಧಲಿಂಗೇಶ್ವರ ಸಂಸ್ಥಾನದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ನಗರಾಭಿವೃದ್ಧಿ ಇಲಾಖೆಯ ಸಚಿವರಾದ ಸುರೇಶ್ ಬಿ.ಎಸ್., ಸರಕಾರಿ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಬೈಲಹೊಂಗಲ ಶಾಸಕರಾದ ಮಹಾಂತೇಶ್ ಕೌಜಲಗಿ, ಶಾಸಕರಾದ ಆಸಿಫ್ ಸೇಠ್, ಗಣೇಶ್ ಹುಕ್ಕೇರಿ, ಬಾಬಾಸಾಹೇಬ್ ಪಾಟೀಲ, ಮಹೇಂದ್ರ ತಮ್ಮಣ್ಣವರ, ವಿಶ್ವಾಸ್ ವೈದ್ಯ, ಮಾಜಿ ಸಚಿವರಾದ ಎಚ್.ವೈ.ಮೇಟಿ, ಎಚ್.ಎಂ.ರೇವಣ್ಣ, ಸೇರಿದಂತೆ ಅನೇಕ‌ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಸೈನಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಛಾಯಾಚಿತ್ರ ತೆಗೆಸಿಕೊಂಡು ಶುಭ ಹಾರೈಸಿದರು.

ಸಂಗೊಳ್ಳಿ ರಾಯಣ್ಣ ಶೌರ್ಯಭೂಮಿ:

ಸಂಗೊಳ್ಳಿ ರಾಯಣ್ಣ ಶೌರ್ಯಭೂಮಿಯಲ್ಲಿ ಕಿತ್ತೂರು ಸಂಸ್ಥಾನದಲ್ಲಿ ವೀರತನಕ್ಕೆ ಹೆಸರಾದ ರೋಗಣ್ಣವರ ಮನೆ, ಹುಲಿಯೊಂದಿಗೆ ಹೋರಾಡುತ್ತಿರುವ ರಾಯಣ್ಣನ ತಂದೆ ಭರಮಪ್ಪ: ಭರಮಪ್ಪನ ಸಾಹಸ ಮೆಚ್ಚಿ ದೊರೆ ಮಲ್ಲಸರ್ಜ ರಕ್ತಮಾನ್ಯ ಭೂಮಿಯನ್ನು ನೀಡುವ ದೃಶ್ಯ.

ಭರಮಪ್ಪ ಹಾಗೂ ಕೆಂಚಮ್ಮ ದಂಪತಿಗೆ ಜನಿಸಿದ ಮಗುವಿಗೆ ರಾಯಣ್ಣ ಎಂದು‌ ನಾಮಕರಣ ದೃಶ್ಯ, ಕುಸ್ತಿ ಕಣದಲ್ಲಿ ಆಡಿ ಗೆದ್ದ ತರುಣ ರಾಯಣ್ಣ; ಕುಸ್ತಿಯಲ್ಲಿ ಗೆದಗದ ರಾಯಣ್ಣನಿಗೆ ದೊರೆ ಖಡ್ಗ ನೀಡುವುದು; ಕಿತ್ತೂರು ರಾಣಿ ಚೆನ್ಮಮ್ಮನ ದರ್ಬಾರ್; ಬ್ರಿಟೀಷರೊಂದಿಗಿನ ಮೊದಲ ಆಂಗ್ಲೋ-ಕಿತ್ತೂರು ಯುದ್ಧ; ಹೀಗೆ ರಾಯಣ್ಣನ ಬಾಲ್ಯದಿಂದ ಹಿಡಿದು ಕೊನೆ ಗಳಿಗೆಯ ಹೋರಾಟದ ದೃಶ್ಯಗಳು ಶಿಲ್ಪವನದಲ್ಲಿ ಜೀವ ಪಡೆದುಕೊಂಡಿವೆ.
***