ಬೆಂಗಳೂರು: ಪ್ರತಿ ಜಿಲ್ಲೆಗಳಲ್ಲಿ ಆರ್ಟ್ ಗ್ಯಾಲರಿ ಸ್ಥಾಪನೆ ಸೇರಿದಂತೆ ಚಿತ್ರಕಲಾ ಪರಿಷತ್ತಿನ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದ ಕುಮಾರಕೃಪದಲ್ಲಿರುವ ಚಿತ್ರಕಲಾ ಪರಿಷತ್ತಿನಲ್ಲಿ 21 ನೇ ಚಿತ್ರಸಂತೆಯನ್ನು ಕ್ಯಾನ್‍ವಾಸ್ ಮೇಲೆ ಸಹಿ ಹಾಕುವ ಮೂಲಕ ಉದ್ಘಾಟಿಸಿದ ಮುಖ್ಯಮಂತ್ರಿಯವರು ಮಾತನಾಡಿದರು.
ಈ ಬಾರಿಯ ಚಿತ್ರಸಂತೆಯನ್ನು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡಿದ ವಿಜ್ಞಾನಿಗಳಿಗೆ ಸಮರ್ಪಿಸಿರುವುದು ಸ್ವಾಗತಾರ್ಹ ಎಂದರು. ಈ ಮೊದಲು 2013 ರಿಂದ 2018 ರವರೆಗೆ ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ವರ್ಷವೂ ಚಿತ್ರಸಂತೆಯನ್ನು ಉದ್ಘಾಟನೆ ಮಾಡಿದ್ದೆ. ಇದು ನನಗೆ ಮುಖ್ಯಮಂತ್ರಿಯಾಗಿ 6ನೇ ಕಾರ್ಯಕ್ರಮ ಎಂದರು.
ಚಿತ್ರಕಲಾ ಪರಿಷತ್ತಿನ ಬೆಳವಣಿಗೆಯನ್ನು ಶ್ಲಾಘಿಸಿದ ಮುಖ್ಯಮಂತ್ರಿಯವರು, ವಿವಿಧ ರಾಜ್ಯಗಳಿಂದ ಆಗಮಿಸಿರುವ ಕಲಾವಿದರಿಗೆ ಸ್ವಾಗತ ಕೋರಿದರು. ಈ ಮೊದಲು ಮುಖ್ಯಮಂತ್ರಿಯಾಗಿದ್ದಾಗ ಚಿತ್ರಕಲಾ ಪರಿಷತ್‍ಗೆ 1 ಕೋಟಿ ರೂ.ಗಳ ಅನುದಾನ ನೀಡಿದ್ದೆ, ಈ ಬಾರಿ 10 ಲಕ್ಷ ರೂ.ಗಳನ್ನು ಕೊಡುವುದಾಗಿ ಭರವಸೆ ನೀಡಿದ್ದೆ.
ಅದನ್ನು 50 ಲಕ್ಷ ರೂ.ಗಳಿಗೆ ಹೆಚ್ಚಿಸುವುದಾಗಿ ತಿಳಿಸಿದರು. ಇದೇ ವೇಳೆ ಮತ್ತಷ್ಟು ಹೆಚ್ಚು ಅನುದಾನ ನೀಡುವಂತೆ ಚಿತ್ರಕಲಾ ಪರಿಷತ್‍ನ ಪ್ರಭಾಕರ್ ಮನವಿ ಮಾಡಿದಾಗ, ‘ಏಯ್ ಸುಮ್ನಿರಪ್ಪ, ಎಲ್ಲವನ್ನೂ ಒಳಗೊಂಡು 50 ಲಕ್ಷ ರೂ. ಕೊಡುತ್ತೇನೆ, ಮುಂದಿನ ವರ್ಷ ಹೆಚ್ಚು ಮಾಡುತ್ತೇನೆ ಎಂದು ಭರವಸೆ ನೀಡಿದರು.