ರಾಮ ಮಂದಿರಕ್ಕೆ ನನ್ನ ದುಡ್ಡು ಬೇಕು, ಆಮಂತ್ರಣ ಮಾತ್ರ ಇಲ್ಲವೆಂದ ಲಕ್ಷ್ಮಣ ಸವದಿ

ರಾಮ ಮಂದಿರಕ್ಕೆ ನನ್ನ ದುಡ್ಡು ಬೇಕು, ಆಮಂತ್ರಣ ಮಾತ್ರ ಇಲ್ಲವೆಂದ ಲಕ್ಷ್ಮಣ ಸವದಿ

 

ಬೆಂಗಳೂರು: ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹ ಮಾಡುವಾಗ ಎಲ್ಲರೂ ನೆನಪಾದರು. ಈಗ ರಾಮ ಮಂದಿರ ಸಿದ್ಧವಾದ ಮೇಲೆ ಯಾರೂ ನೆನಪಿಗೆ ಬರುವುದಿಲ್ಲ. ನಾನು ಕೂಡಾ ರಾಮ ಮಂದಿರ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ಕೊಟ್ಟಿದ್ದೇನೆ.

ಸ್ಥಳೀಯ ಆರ್‌ಎಸ್‌ಎಸ್‌ ನಾಯಕರು ಹಣ ತೆಗೆದುಕೊಂಡು ಹೋಗಿದ್ದರು. ಆದರೆ, ಈಗ ಯಾವುದಕ್ಕೂ ಆಹ್ವಾನ ನೀಡಿಲ್ಲ. ಬಿಜೆಪಿಯಲ್ಲಿ ಇತ್ತೀಚೆಗೆ ಒನ್ ಮ್ಯಾನ್ ಆರ್ಮಿ ರೀತಿ ಆಗಿದೆ ಎಂದು ಮಾಜಿ ಡಿಸಿಎಂ, ಕಾಂಗ್ರೆಸ್‌ ಮುಖಂಡ ಲಕ್ಷ್ಮಣ ಸವದಿ ಹೇಳಿದರು.

ವಿಕಾಸಸೌಧಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ರಾಮ ಮಂದಿರಕ್ಕಾಗಿ ಬಿಜೆಪಿ ಹಿರಿಯ ನಾಯಕ ಲಾಲ್‌ ಕೃಷ್ಣ ಆಡ್ವಾಣಿ ಅವರು ರಥಯಾತ್ರೆ ಮಾಡಿದ್ದರು. ಆದರೆ, ಅವರೇ ಈಗ ರಾಮ ಮಂದಿರ ಉದ್ಘಾಟನೆಗೆ ಬರಬಾರದು ಅಂತ ಸಂದೇಶ ಕೊಡೋದು ಎಷ್ಟು ಸರಿ? ರಾಮ ಮಂದಿರ ಆಗೋಕೆ ಆಡ್ವಾಣಿ ಕಾರಣ. ಈಗ ಅವರನ್ನೇ ಬರಬಾರದು ಎಂದು ಹೇಳುವ ಬಿಜೆಪಿಯವರಿಗೆ ಎಲ್ಲಿ ನೈತಿಕತೆ ಇದೆ? ಎಂದು ಪ್ರಶ್ನೆ ಮಾಡಿದರು.

ಆಡ್ವಾಣಿ ಅವರನ್ನೇ ಬರಬೇಡಿ ಎಂದು ಹೇಳಿದ ಮೇಲೆ ಇನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ಕೊಡದೇ ಇರುವ ವಿಷಯ ದೊಡ್ಡದು ಅಲ್ಲ. ಬಿಜೆಪಿ ಅವರು ಮೊದಲು ಹಿಂದು ಹಿಂದು ಎಂದು ಹೇಳುತ್ತಾರೆ. ಯಾವಾಗ ಅಧಿಕಾರ ಬರುತ್ತದೋ ಆಗ ನಾವು ಮುಂದು, ನೀವು ಹಿಂದೆ ಅಂತಾರೆ ಎಂದು ಲಕ್ಷ್ಮಣ ಸವದಿ ಟೀಕಿಸಿದರು.

ಬಿಜೆಪಿ ಅವರಿಗೆ ಲಾಭ ಇಲ್ಲ ಹುಬ್ಬಳ್ಳಿಯಲ್ಲಿ 31 ವರ್ಷದ ಹಳೇ ಕೇಸ್‌ ರಿಒಪನ್‌ ಮಾಡಿ ಕರ ಸೇವಕರ ಬಂಧನಕ್ಕೆ ಮುಂದಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಣ ಸವದಿ, ಈಗಾಗಲೇ ಗೃಹ ಸಚಿವರು ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈಗ ಇದಕ್ಕೆ ರಾಜಕೀಯ ಬಣ್ಣ ಬಳೆಯೋದು ಬೇಡ. ಹಳೇ ಕೇಸ್ ಆಗಿರುವುದರಿಂದ ಅವುಗಳನ್ನು ಮಕ್ತಾಯ ಮಾಡಲು ಪ್ರಕ್ರಿಯೆಗಳು ನಡೆಯುತ್ತಿವೆ. ಬಿಜೆಪಿ ಅವರಿಗೆ ಕೆಲಸ ಇಲ್ಲ. ಭಾವನಾತ್ಮಕ ವಿಚಾರವನ್ನು ತೆಗೆದುಕೊಂಡು ಸೃಷ್ಟಿ ಮಾಡಿ, ಬಣ್ಣ ಕಟ್ಟಿ ಈ ರೀತಿ ಮಾಡುತ್ತಾರೆ. ಇದರಿಂದ ಬಿಜೆಪಿ ಅವರಿಗೆ ಲಾಭ ಇಲ್ಲ ಎಂದು ಹೇಳಿದರು.

ಭಾವನಾತ್ಮಕ ವಿಚಾರದಲ್ಲಿ ಹೊಟ್ಟೆ ತುಂಬುವುದಿಲ್ಲ
ಜನರಿಗೆ ಸಾಕಷ್ಟು ಸಮಸ್ಯೆ ಇದೆ. ಜನರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಬಿಜೆಪಿ ಕೆಲಸ ಮಾಡಲಿ. ಭಾವನಾತ್ಮಕ ವಿಚಾರದಲ್ಲಿ ಹೊಟ್ಟೆ ತುಂಬುವುದಿಲ್ಲ. ಜನರ ಸಮಸ್ಯೆ ಬಗ್ಗೆ ಬಿಜೆಪಿಯವರು ಕೆಲಸ ಮಾಡಲಿ. ವಿಪಕ್ಷವಾಗಿ ಜನರ ಪರ ಕೆಲಸ ಮಾಡಲಿ. ಅದನ್ನು ಮಾಡಿದರೆ ಮುಂದೆ ಬಿಜೆಪಿ ಅವರಿಗೆ ಒಳ್ಳೇ ಅವಕಾಶ ಸಿಗಲಿದೆ ಎಂದು ಲಕ್ಷ್ಮಣ ಸವದಿ ಹೇಳಿದರು