ದೆಹಲಿ ಸೆ 21:ಹಮಾಲಿ’ ಆಗಿ ಉಡುಪು ಧರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಟ್ಕೇಸ್ ಅನ್ನು ತಲೆಯ ಮೇಲೆ ಇಟ್ಟುಕೊಂಡು ಸಾಗಿದ ವಿಡಿಯೋ ವೈರಲ್ ಆಗಿದೆ. ಹಮಾಲಿಗಳೊಂದಿಗೆ ಸಂಪರ್ಕ ಸಾಧಿಸುವ ಮತ್ತು ಅವರ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ರಾಹುಲ್ ಗಾಂಧಿ ಅವರು ತಲೆಯ ಮೇಲೆ ಟ್ರಾಲಿ ಬ್ಯಾಗ್ ಹೊತ್ತು ಸಾಗಿದರು. ಜನರ ಬಳಿ ಸಾಗಿ ಅವರ ಸಮಸ್ಯೆಗಳನ್ನು ಆಲಿಸುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸದ್ಯ ಹಮಾಲಿ ಕಾರ್ಮಿಕರನ್ನು ಭೇಟಿ ಮಾಡುವ ಮೂಲಕ ಅವರ ಮನ ಗೆದ್ದಿದ್ದಾರೆ. ಕೇವಲ ಭೇಟಿ ಮಾಡುವುದು ಮಾತ್ರವಲ್ಲದೆ ಹಮಾಲಿ ಕಾರ್ಮಿಕರಂತೆ ಉಡುಪು ಧರಿಸಿ ಅವರಂತೆ ಕೂಲಿ ಕೆಲಸ ಮಾಡಿದ್ದು ವಿಶೇಷವಾಗಿತ್ತು.
ದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ರಾಹುಲ್ ಗಾಂಧಿ ಅವರು ಕಾಣಿಸಿಕೊಂಡರು. ಅಲ್ಲಿನ ಹಮಾಲಿ ಕಾರ್ಮಿಕರನ್ನು ಭೇಟಿ ಮಾಡಲು ರಾಹುಲ್ ಗಾಂಧಿ ಅವರಂತೆ ಉಡುಪು ಧರಿಸಿ ಒಗ್ಗಟ್ಟಿನ ಸೂಚನೆಯನ್ನು ನೀಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕ್ಲಾಸಿಕ್ ಕೆಂಪು ಶರ್ಟ್ ಮತ್ತು ಪೋರ್ಟರ್ ಬ್ಯಾಡ್ಜ್ ಅನ್ನು ಧರಿಸಿದ್ದಲ್ಲದೆ, ಟ್ರಾಲಿ ಬ್ಯಾಗನ್ನು ಕೂಡ ತಲೆಯ ಮೇಲೆ ಹೊತ್ತು ರಾಹುಲ್ ಸಾಗಿದರು.