*ಹುಬ್ಬಳ್ಳಿ. ಸೆ.19:* ಅಖಂಡ ವೀರಶೈವ ಲಿಂಗಾಯತ ಸಮುದಾಯ ದೊಡ್ಡ ಶಕ್ತಿ ಕೇಂದ್ರವಾಗಿದೆ. ಸರಿಯಾದ ಮಾರ್ಗದರ್ಶನ ಇಲ್ಲದೇ ಜಾತಿ, ಜಾತಿ ವಿಂಗಡಣೆಯಿಂದ ಸಮುದಾಯ ಸಂಕೀರ್ಣವಾಗುತ್ತಿದೆ. ಕೆಲವು ಶಕ್ತಿಗಳು ಮೂಗಿಗೆ ತುಪ್ಪ ಹಚ್ಚಿ ಸಮುದಾಯವನ್ನು ವಿಂಗಡಿಸುತ್ತಿವೆ. ಇದರ ಬಗ್ಗೆ ವೀರಶೈವ ಲಿಂಗಾಯತ ಸಮುದಾಯ ಎಚ್ಚರಿಕೆಯಿಂದ ಇದ್ದು, ಭವಿಷ್ಯದ ಅರಿವಿನಿಂದ ಮುನ್ನಡೆಯಬೇಕೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ಸಂಜೆ ಸುಳ್ಳ ಗ್ರಾಮದ ಪಂಚಗೃಹ ಹಿರೇಮಠದಲ್ಲಿ ಶ್ರಾವಣ ಪುರಾಣ ಮಂಗಲೋತ್ಸವ ಸಂದರ್ಭದಲ್ಲಿ ವೀರಶೈವ ಜಂಗಮ ಸಂಸ್ಥೆ, ಡಾ. ಮಾಲತಿ ಹಿರೇಮಠ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಶ್ರೀ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಪೀಠಾರೋಹಣದ 32ನೇ ವರ್ಷದ ಸವಿ ನೆನಪಿಗಾಗಿ ಆಯೋಜಿಸಿದ್ದ ಪ್ರಥಮ ದತ್ತಿ ಉಪನ್ಯಾಸ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಅನೇಕರು ತಮ್ಮ ಸ್ವಾರ್ಥ ಸಾಧನೆಗಾಗಿ ಮತ್ತು ಉದ್ದೇಶಪೂರ್ವಕವಾಗಿ ಸತ್ಯ ಸಂಗತಿಗಳನ್ನು ಮರೆಮಾಚುತ್ತಿದ್ದಾರೆ. ಜಾತಿ, ಉಪಪಂಗಡ ಹೆಸರಿನಲ್ಲಿ ಅಖಂಡ ವೀರಶೈವ ಸಮಾಜವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ. ಎಲ್ಲರೂ ಜಾಗೃತರಾಗಬೇಕು. ಸಮಾಜದ ಅಖಂಡತೆಯಲ್ಲಿ ದೊಡ್ಡಶಕ್ತಿ ಇದೆ. ಇದನ್ನು ಎಲ್ಲ ನಾಯಕರು ಅರಿತು ನಡೆಯಬೇಕು.
*ಧರ್ಮ ನಾಶವೆಂದವರೇ ನಾಶವಾಗಿದ್ದಾರೆ:* ಆಡಿದ ಮಾತಿನಂತೆ ನಡೆಯುವುದೆ ಧರ್ಮ. ಧರ್ಮವನ್ನು ನಾಶ ಮಾಡುತ್ತೇವೆ ಎಂದರೆ, ಅದು ಸತ್ಯದ ನಾಶವೆಂದಂತೆ. ಮನುಷ್ಯನ ಸುಖ, ಸಮೃದ್ಧಿಗೆ ಧರ್ಮ ಬೇಕು. ಧರ್ಮ ಅವಿನಾಶವಾದದ್ದು, ಧರ್ಮ ಹಿಂದೆ ಇತ್ತು, ಇಂದೂ ಇದೆ, ಮುಂದೆಯೂ ಧರ್ಮ ಇರುತ್ತದೆ. ಜಗತ್ತಿಗೆ ಧರ್ಮವೇ ಬೆಳಕು. ಧರ್ಮ ನಾಶವೆಂದವರೇ ನಾಶವಾದ ಉದಾಹರಣೆಗಳಿವೆ. ಮಣ್ಣು ಎಸೆದವರ ಕಣ್ಣಿಗೆ ಬೀಳುತ್ತದೆ. ಧರ್ಮದ ಕುರಿತು ಯಾರೂ ಅಸಂಬದ್ಧ ಹೇಳಿಕೆ ನೀಡಬಾರದು.
*ಸಂಶೋಧನೆ, ಸಾಹಿತ್ಯ ರಚನೆಯಲ್ಲಿ ಸತ್ಯ ಪ್ರಾಮಾಣಿಕತೆ ಇರಲಿ:* ಕೆಲವು ಸಂಶೋಧಕರಿಗೆ, ಸಾಹಿತ್ಯ ರಚನಾಕಾರರಿಗೆ 12ನೇ ಶತಮಾನದ ನಂತರದ್ದು ಮಾತ್ರ ಕಾಣುತ್ತದೆ; 12ನೇ ಶತಮಾನದ ಪೂರ್ವದ ಪರಂಪರೆ, ಧಾರ್ಮಿಕ ಕ್ರಾಂತಿ, ಸಾಮಾಜಿಕ ಬದಲಾವಣೆ ಕಾಣುತ್ತಿಲ್ಲ ಎಂದರು. ಕೆಲವರು ಉದ್ದೇಶಪೂರ್ವಕವಾಗಿ ಪೂರ್ವದ ದಾಖಲೆಗಳನ್ನು ಮರೆಮಾಚಿ, 12ನೇ ಶತಮಾನದ ಘಟನಾವಳಿಗಳನ್ನು ಮಾತ್ರ ಮುನ್ನಲೆಗೆ ತರಲು ಪ್ರಯತ್ನಿಸುತ್ತಿದ್ದಾರೆ. ಬಸವಾದಿ ಶರಣರಿಗೂ ದೀಕ್ಷಾ ಗುರು ಇದ್ದರು. ಗುರು ಪರಂಪರೆ ಕೃಪಾಶೀರ್ವಾದದಿಂದ ಅವರು ಬೆಳೆದು ಬಂದಿದ್ದಾರೆ. ಕೈಯಿಂದ ಕಣ್ಣು ಮುಚ್ಚಿದ ಮಾತ್ರಕ್ಕೆ ಸೂರ್ಯ ಚಂದ್ರರು ಹೇಗೆ ಮರೆಯಾಗುವದಿಲ್ಲವೋ ಹಾಗೆ ನಿಜಾಂಶಗಳು ಎಲ್ಲರಿಗೂ ತಿಳಿದು ಬರುತ್ತವೆ. ವಿಷಯದ ಆಳಕ್ಕೆ ಹೋದಾಗ ಸತ್ಯ ಸಂಗತಿಗಳು ತಿಳಿಯುತ್ತವೆ. ಪಕ್ಷಪಾತದಿಂದ ಕೂಡಿದ ಹೇಳಿಕೆ, ಸಾಹಿತ್ಯ ರಚನೆಗಳಿಂದ ಐತಿಹಾಸಿಕ ಅಪರಾಧವಾಗುತ್ತದೆ ವಿನಾ ಏನನ್ನು ಸಾಧಿಸಲಾಗುವುದಿಲ್ಲ.
*ಸಮಾಜ ಒಡೆಯುವವರ ಆಟ ನಡೆಯುವುದಿಲ್ಲ:* ವೀರಶೈವ ಲಿಂಗಾಯತ ಬಹು ದೊಡ್ಡ ಸಮುದಾಯ. ಈ ಸಮಾಜ ಒಡೆಯುವ ಉದ್ದೇಶದಿಂದ ಆಡಿದ ಆಟ ನಡೆದಿಲ್ಲ; ಮುಂದೆಯೂ ನಡೆಯುವುದಿಲ್ಲ. ಇಲ್ಲದ ಆಸೆ ಆಮಿಷ ತೋರಿಸಿ, ಮೂಗಿಗೆ ತುಪ್ಪ ಹಚ್ಚುವ ಕಾರ್ಯ ಕೆಲವರಿಂದ ಆಗಿದೆ. ಅದಕ್ಕೆ ತಕ್ಕ ಉತ್ತರವೂ ಸಿಕ್ಕಿದೆ. ವೀರಶೈವರನ್ನು ಒಡೆಯಬೇಕೆನ್ನುವವರು ಎಚ್ಚರದಿಂದ ಇರಬೇಕು. ಧರ್ಮ ಛಿದ್ರಗೊಳಿಸಲು ಯತ್ನಿಸಿದರೆ ಅವರೇ ಛಿದ್ರವಾಗುತ್ತಾರೆ. ಧರ್ಮವು ಶಾಶ್ವತ, ನಿತ್ಯ ನಿರಂತರವಾಗಿದೆ. ಮನುಷ್ಯರಿಗೆ ಶಾಂತಿ, ನೆಮ್ಮದಿ ಬೇಕು. ಇದು ದೈವ ಸಾನ್ನಿಧ್ಯ, ಗುರು ಸಾನ್ನಿಧ್ಯದಲ್ಲಿ ದೊರಕುತ್ತದೆ.
*ವೀರಶೈವ ಧರ್ಮಕ್ಕೆ ಪರಮಾಚಾರ್ಯರ ಕೊಡುಗೆ ಅಪಾರವಾಗಿದೆ*: ಧಾರ್ಮಿಕ, ಸಾಂಸ್ಕೃತಿಕ ಶ್ರೀಮಂತಿಕೆ ಪಂಚಪೀಠಗಳ ಕೊಡುಗೆಯಾಗಿದೆ. ಧರ್ಮ ಜಾಗೃತಿ ಜೊತೆಗೆ ಸಾಮಾಜಿಕ ಸತ್ಕ್ರಾಂತಿ ಮಾಡಿದ ಕೀರ್ತಿ ಗುರು ಪರಂಪರೆಗೆ ಸಲ್ಲುತ್ತದೆ. ಪಂಚಪೀಠಗಳು ಆದಿಕಾಲದಿಂದಲೂ ಧರ್ಮ ರಕ್ಷಣೆ, ಸಾಮಾಜಿಕ ಸುಧಾರಣೆಗೆ ಮಾರ್ಗದರ್ಶನ ಮಾಡಿವೆ. ಅಕ್ಟೋಬರ್ 15 ರಿಂದ 24ರ ವರೆಗೆ ರಾಯಚೂರ ಜಿಲ್ಲೆ ಲಿಂಗಸುಗೂರಿನಲ್ಲಿ ಜರುಗುವ ಶ್ರೀ ರಂಭಾಪುರಿ ಜಗದ್ಗುರುಗಳ 32ನೇ ವರ್ಷದ ದಸರಾ ಧರ್ಮ ಸಮಾರಂಭದಲ್ಲಿ ಎಲ್ಲ ಭಕ್ತರು ಭಾಗವಹಿಸಬೇಕೆಂದು ಜಗದ್ಗುರುಗಳು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಸುಳ್ಳ ಪಂಚಗೃಹ ಹಿರೇಮಠದ ಷ.ಬ್ರ.ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆದಾಗ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಎಂದರು. ಸಮಾರಂಭದಲ್ಲಿ ಹೂಲಿ ಸಾಂಬಯ್ಯನಮಠದ ಷ.ಬ್ರ.ಉಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಶಿರಕೋಳ ಹಿರೇಮಠದ ಷ.ಬ್ರ.ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು. ಶಾಸಕ ಎನ್.ಹೆಚ್.ಕೊನರಡ್ಡಿ, ಮಾತನಾಡಿದರು.
ಸಂಶೋಧಕರಾದ ಡಾ.ಎ.ಸಿ.ವಾಲಿ ಗುರೂಜಿ ಅವರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಧಾರ್ಮಿಕ, ಸಾಮಾಜಿಕ, ಸಾಹಿತ್ಯದ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಬ್ಯಾಹಟ್ಟಿಯ ಷ.ಬ್ರ.ಮರುಳಸಿದ್ದ ಶಿವಾಚಾರ್ಯ ಸ್ವಾಮಿಗಳು, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶಿವಾನಂದ ಕರಿಗಾರ, ವೀರಶೈವ ಜಂಗಮ ಸಂಸ್ಥೆ ಉಪಾಧ್ಯಕ್ಷ ಮೃತ್ಯುಂಜಯ ಕೋರಿಮಠ. ಕಿರೇಸೂರದ ಗುರುನಗೌಡ, ರಾಯನಗೌಡ್ರು, ಸುಳ್ಳದ ಯಶವಂತ್ ಕುಲಕರ್ಣಿ, ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ.ಕೆ.ಎಸ್.ಕೌಜಲಗಿ ಸೇರಿದಂತೆ ಇತರರು ಇದ್ದರು. ವೇದಮೂರ್ತಿ ಸಿದ್ದರಾಮಯ್ಯ ಹಿರೇಮಠ ಪುರಾಣ ಮಂಗಲಗೊಳಿಸಿದರು. ಜಂಗಮ ಸಂಸ್ಥೆ ಅಧ್ಯಕ್ಷ ಡಾ. ಸುರೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಾಹಿತ್ ಪರಿಷತ್ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ್ ಅಂಗಡಿ ಸ್ವಾಗತಿಸಿದರು. ಎಂ.ಎಸ್.ಶಿವಳ್ಳಿಮಠ ಕಾರ್ಯಕ್ರಮ ನಿರೂಪಿಸಿದರು. ಗುರುಸಿದ್ದಯ್ಯ ಸವದಿಮಠ ಪ್ರಾರ್ಥಿಸಿದರು. ಸಣಕಲ್ಲಪ್ಪ ಒಂಟಿ ವಂದಿಸಿದರು. ಸುಳ್ಳ ಗ್ರಾಮಸ್ಥರು, ಸುತ್ತಲಿನ ಗ್ರಾಮಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
*******